Updated By: Priyalachhi
ಬೆಂಗಳೂರು: ಬಾಂಗ್ಲಾದೇಶದ ಢಾಕಾದಲ್ಲಿ ಇತ್ತೀಚೆಗೆ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡದ ಭಾಗವಾಗಿದ್ದ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಹಾಗೂ ಚೀನಾದಲ್ಲಿ ನಡೆದ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್ ಸಿಂಗಲ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಆಟಗಾರ್ತಿ ಲಕ್ಷ್ಯ ರಾಜೇಶ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿ, ಸನ್ಮಾನಿಸಿದರು.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಅವರ ನೇತೃತ್ವದಲ್ಲಿ ಇಬ್ಬರೂ ಕ್ರೀಡಾಪಟುಗಳು ಇಂದು ಸಿಎಂರನ್ನು ಅವರ ಕಚೇರಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಅಭಿನಂದಿಸಿ, ಸನ್ಮಾನಿಸಿದ ಸಿದ್ದರಾಮಯ್ಯ, ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿದರು.
ರಾಜ್ಯ ಮತ್ತು ದೇಶಕ್ಕೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ಇನ್ನಷ್ಟು ಸಾಧನೆ ಮಾಡುವಂತೆಯೂ ಸಿಎಂ ಹಾರೈಸಿದರು. ಇಬ್ಬರೂ ವಿಜೇತಪಟುಗಳಿಗೆ ತಲಾ ಐದು ಲಕ್ಷ ರೂ.ಯ ಚೆಕ್ ವಿತರಿಸುವಂತೆ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೇಶ್ ಮತ್ತು ತರಬೇತುದಾರ ಬಿ.ಎನ್.ಸುಧಾಕರ್ ಉಪಸ್ಥಿತರಿದ್ದರು.



