ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಗೊಂದಲಕ್ಕೆ ಹೈಕಮಾಂಡ್ ಸ್ಪಷ್ಟತೆ ಸಿಗುವ ವಿಶ್ವಾಸವಿದೆ: ಬಿ.ವೈ. ವಿಜಯೇಂದ್ರ

0
18

Updated By: Priyalachhi

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಗೊಂದಲದ ಬಗ್ಗೆ ಹೈಕಮಾಂಡ್​​ನಿಂದ ಸ್ಪಷ್ಟತೆ ಸಿಗುವ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲಕ್ಕೆ ಈಗಲಾದರೂ ತೆರೆ ಬೀಳುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೂ ವಿಶ್ವಾಸ ಇದೆ, ಹೈಕಮಾಂಡ್​​ನಿಂದ ಸ್ಪಷ್ಟತೆ ಸಿಗುತ್ತೆ ಎಂಬ ವಿಶ್ವಾಸ ಇದೆ. ನನಗಂತೂ ಸ್ಪಷ್ಟತೆ ಸಿಕ್ಕಿದೆ. ರಾಜ್ಯಾಧ್ಯಕ್ಷ ಆಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ತಾವೇ ಮುಂದುವರೆಯುವ ಬಗ್ಗೆ ಸುಳಿವು ನೀಡಿದರು.

‘ಮಂಗಲ್ ರಾಜ್’ ಬಯಸಿ ಎನ್‌ಡಿಎಗೆ ಮತ: ಬಿಹಾರದ ಜನ ಎನ್‌ಡಿಎ ಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ. ನಮಗೆ ಅಲ್ಲಿ ಐತಿಹಾಸಿಕ ಜಯ ಸಿಕ್ಕಿದೆ. ಬಿಹಾರ ಚುನಾವಣೆ ಮುಗಿಯುವವರೆಗೂ ವೋಟ್ ಚೋರಿ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ ‘ಜಂಗಲ್ ರಾಜ್’ ಅನ್ನು ಬಿಹಾರ ಜನ ಮರೆತಿಲ್ಲ. ಮತ್ತೊಮ್ಮೆ ‘ಮಂಗಲ್ ರಾಜ್’ ಬಯಸಿ ಎನ್‌ಡಿಎಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲೂ, ದೇಶದಲ್ಲೂ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ಓಲೈಕೆ ರಾಜಕೀಯ ಮಾಡುತ್ತಿದೆ. ಇದರಿಂದ ಜನರ ವಿಶ್ವಾಸ ಗೆಲ್ಲುವುದಕ್ಕೆ ಆಗಲ್ಲ ಎಂದರು.

ದೇಶದಿಂದ ರಾಹುಲ್ ಗಾಂಧಿ ಮಾಯ: ರಾಹುಲ್ ಗಾಂಧಿ ಐರನ್ ಲೆಗ್ ಅನ್ನೋದು ಸಾಬೀತಾಗಿದೆ. ಅವರು ಎಲ್ಲಿ ಕಾಲಿಡುತ್ತಾರೆಯೋ ಅಲ್ಲಿ ಅವರ ಪಕ್ಷ ಉದ್ಧಾರ ಆಗಲ್ಲ. ಇದಕ್ಕೆ ನಿನ್ನೆ ಬಂದ ಬಿಹಾರ ಫಲಿತಾಂಶವೇ ಸ್ಪಷ್ಟ ಸಂದೇಶ. ಹಾಗಾಗಿ ರಾಹುಲ್ ಗಾಂಧಿ ದೇಶದಿಂದ ಮಾಯವಾಗಿದ್ದರು. ಬಿಜೆಪಿ ಅಭಿವೃದ್ಧಿ ಮಾಡುತ್ತಿರುವುದನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ಅದಕ್ಕಾಗಿಯೇ ದೇಶದಲ್ಲಿ, ದೇಶದ ಹೊರಗೆ ಭಾರತ ವಿರೋಧಿ,‌ ಬಿಜೆಪಿ ವಿರೋಧಿ ಹೇಳಿಕೆ ಕೊಡುತ್ತಾರೆ. ಅವರಿಗೆ ಸೂಕ್ತ ವಿಷಯಗಳು ಸಿಗದೇ ವೋಟ್ ಚೋರಿ ಎಂಬ ಖಾಲಿ ಡಬ್ಬಾ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಬಿಹಾರ ಫಲಿತಾಂಶ ನಮಗೆ ಆನೆ ಬಲ ಕೊಟ್ಟಿದೆ. ಒಂದು ಸಂದೇಶವನ್ನೂ ಈ ಫಲಿತಾಂಶ ನೀಡಿದೆ ಎಂದು ತಿಳಿಸಿದರು.

ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಡಬೇಕಿದೆ: ಪ್ರಧಾನಿ ಮೋದಿಯವರ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸವನ್ನೂ ಮಾಡಬೇಕಿದೆ. ಕಾಂಗ್ರೆಸ್​ನವರ ಗ್ಯಾರಂಟಿಗಳಿಂದ ಅವರೇ ಬೇಸತ್ತು ಹೋಗಿದ್ದಾರೆ. ಅನಾವಶ್ಯಕವಾಗಿ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿ ನಾವು ಹೋರಾಟ ಮಾಡಬೇಕಾಗಿದೆ. ನಾವೆಲ್ಲ ಒಟ್ಟಾಗಿ, ಒಂದಾಗಿ ಬೀದಿಗಿಳಿದು ಹೋರಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here