ನಂದಿನಿ ಬ್ರ್ಯಾಂಡ್​ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ: ಕಿಂಗ್​ಪಿನ್ ದಂಪತಿ ಬಂಧನ

0
22

Updated By: Priyalachhi

ಬೆಂಗಳೂರು: ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಪ್ರಕರಣ ಸಂಬಂಧ ನಂದಿನಿ ಉತ್ಪನ್ನದ ಅಧಿಕೃತ ಮಾರಾಟಗಾರ ಸೇರಿ ನಾಲ್ವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಇದೀಗ ಪ್ರಕರಣದ ಪ್ರಮುಖ ರೂವಾರಿಗಳಾದ ಇನ್ನಿಬ್ಬರನ್ನು ಮಟ್ಟ ಹಾಕಿದ್ದಾರೆ.

ಮೈಸೂರಿನ ವಿಜಯನಗರದಲ್ಲಿ ವಾಸವಾಗಿರುವ ಶಿವಕುಮಾರ್ ಹಾಗೂ ರಮ್ಯಾ ಎಂಬ ದಂಪತಿಯನ್ನು ಅರೆಸ್ಟ್ ಮಾಡಲಾಗಿದೆ. ನಕಲಿ ತುಪ್ಪ ತಯಾರಿಸುವುದಕ್ಕಾಗಿಯೇ ಇವರು ತಮಿಳುನಾಡಿನ ತಿರುಪತ್ತೂರಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಫ್ಯಾಕ್ಟರಿ ತೆರೆದಿದ್ದರು. ಈ ಮೂಲಕ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್​ಪ್ರೈಸಸ್‌ ಎಂಬ ಗೋದಾಮಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಹಾಗೂ ಕೆಎಂಎಫ್ ಜಾಗೃತದಳ ಜಂಟಿ ಕಾರ್ಯಾಚರಣೆ ನಡೆಸಿ ನ.14ರಂದು ದಾಳಿ ನಡೆಸಿ ನಂದಿನಿ ಉತ್ಪನ್ನಗಳ ಅಧಿಕೃತ ಮಾರಾಟಗಾರ ಮಹೇಂದ್ರ, ಈತನ ಪುತ್ರ ದೀಪಕ್, ತಮಿಳುನಾಡು ಮೂಲದ ಮುನಿರಾಜು ಹಾಗೂ ಅಭಿ ಅರಸು ಎಂಬವರನ್ನು ಬಂಧಿಸಿ 1.26 ಕೋಟಿ ರೂ ಮೌಲ್ಯದ 8,136 ನಂದಿನಿ ಹೆಸರಿನ ಕಲಬೆರಕೆ ತುಪ್ಪ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಆರೋಪಿಗಳ ವಿಚಾರಣೆ ವೇಳೆ ಶಿವಕುಮಾರ್ ದಂಪತಿ 2021ರಿಂದ ತಮಿಳುನಾಡಿನಲ್ಲಿ ಫ್ಯಾಕ್ಟರಿ ತೆರೆದಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಕೆಎಂಎಫ್​​ನಿಂದ ಮಹೇಂದ್ರ ಖರೀದಿಸುತ್ತಿದ್ದ ಅಸಲಿ ತುಪ್ಪವನ್ನು ತಮಿಳುನಾಡಿಗೆ ಕಳುಹಿಸುತ್ತಿದ್ದ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ಮುನಿರಾಜು ಹಾಗೂ ಅಭಿ ಅವರು ಅಸಲಿ ತುಪ್ಪಕ್ಕೆ ಪಾಮ್ ಎಣ್ಣೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಫ್ಯಾಕ್ಟರಿಯಲ್ಲಿ ಮಿಶ್ರಣ ಮಾಡಿ ಪ್ಲಾಸ್ಟಿಕ್ ಬಾಟಲ್ ಹಾಗೂ ಸ್ಯಾಚೆಟ್​​ನಲ್ಲಿ ತುಂಬಿ ಪ್ಯಾಕ್ ಮಾಡಿ ರಾಜಧಾನಿಯ ವಿವಿಧ ಅಂಗಡಿಗಳಲ್ಲಿ ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here