ಕಿರ್ಲೋಸ್ಕರ್​ನಿಂದ ರಾಜ್ಯದಲ್ಲಿ ₹3,000 ಕೋಟಿ ಹೂಡಿಕೆ

0
44

Updated By: Priyalachhi

ಬೆಂಗಳೂರು: ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್ ಕರ್ನಾಟಕದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಬಂಡವಾಳ ಹೂಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದರು.‌

ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಉನ್ನತ ಮಟ್ಟದ ನಿಯೋಗದೊಂದಿಗೆ ರೋಡ್ ಶೋ ನಡೆಸಿದ ಅವರು, ಹೂಡಿಕೆ ಕುರಿತು ಹತ್ತಕ್ಕೂ ಹೆಚ್ಚು ಉದ್ಯಮಿಗಳನ್ನು ಭೇಟಿಯಾಗಿ, ಮಾತುಕತೆ ನಡೆಸಿದರು. ಜೊತೆಗೆ ವಿಪ್ರೋ ಪ್ಯಾರಿ, ಅಟ್ಲಾಸ್ ಕಾಪ್ಕೋ, ಬೆಲ್ ರೈಸ್ ಇಂಡಸ್ಟ್ರೀಸ್, ಫಿನೋಲೆಕ್ಸ್ ಮತ್ತು ಫ್ಲೂಯಿಡ್ ಕಂಟ್ರೋಲ್ಸ್ ಲಿಮಿಟೆಡ್ ಉದ್ಯಮಗಳು ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿವೆ. ಬಂಡವಾಳ ತೊಡಗಿಸಲು ಮುಂದಾಗಿರುವ ಈ ಕಂಪನಿಗಳಿಗೆ ಭೂಮಿ, ಮೂಲಸೌಕರ್ಯ ಮುಂತಾದ ಅನುಕೂಲಗಳ ಜೊತೆಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.

ಹಿರಿಯೂರಿನಲ್ಲಿ ಹೊಸ ಕೈಗಾರಿಕೆ,ಹಿರಿಯೂರಿನಲ್ಲಿ 3,000 ಕೋಟಿ ರೂ. ಹೂಡಿಕೆಗೆ ನಿರ್ಧರಿಸಿದ  ಕಿರ್ಲೋಸ್ಕರ್‌; ಶೇ 99 ಕನ್ನಡಿಗರಿಗೆ ಉದ್ಯೋಗ ಮೀಸಲು - kirloskar decides to invest  rs ...

ಈಗಾಗಲೇ ಹಿರಿಯೂರಿನಲ್ಲಿ ತನ್ನ ಘಟಕ ಹೊಂದಿರುವ ಕಿರ್ಲೋಸ್ಕರ್ ಫೆರೋಸ್, ಅದನ್ನು ಮೇಲ್ದರ್ಜೆಗೇರಿಸಲು ಮುಂದಾಗಿದ್ದು, ಇಲ್ಲಿ ಸ್ಪಾಂಜ್ ಪೈಪ್ ಉತ್ಪಾದನೆ ಆರಂಭಿಸಲಿದೆ. ಜೊತೆಗೆ ತನ್ನ ಉಕ್ಕು ಉತ್ಪಾದನೆ ಘಟಕದ ಸಾಮರ್ಥ್ಯ ಹೆಚ್ಚಳ, ಕಬ್ಬಿಣದ ಅದಿರು ಸಂಸ್ಕರಣೆ ಹೆಚ್ಚಳ, ಫೌಂಡ್ರಿ ಘಟಕದ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದಿದ್ದಾರೆ.

ಈ ಕಂಪನಿಯ ಉದ್ಯೋಗಿಗಳಲ್ಲಿ ಶೇ.99ರಷ್ಟು ಕನ್ನಡಿಗರೇ ಇದ್ದಾರೆ. ಇದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿ ಸಾಧ್ಯವಾಗಲಿದೆ. ಕಿರ್ಲೋಸ್ಕರ್ ಕಂಪನಿಯು 20 ವರ್ಷಗಳಿಂದಲೂ ತನ್ನ ಆದಾಯದಲ್ಲಿ ಶೇ.2ರಷ್ಟು ಲಾಭಾಂಶವನ್ನು ಸಿಎಸ್ಆರ್ ನಿಧಿಗೆ ಕೊಡುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಇದೆ ಎಂದು ತಿಳಿಸಿದ್ದಾರೆ.

ವಿಪ್ರೋ ಪ್ಯಾರಿ ಕಂಪನಿಯು ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಕಾಪರ್ ಲ್ಯಾಮಿನೇಟ್ ಉತ್ಪಾದನಾ ಘಟಕವನ್ನು ಆರಂಭಿಸಿದೆ. ದೊಡ್ಡಬಳ್ಳಾಪುರದ ಸಮೀಪ ಇರುವ ಆದಿನಾರಾಯಣ ಹೊಸಹಳ್ಳಿಯಲ್ಲಿರುವ ಕೆಐಎಡಿಬಿ ನಿವೇಶನದಲ್ಲಿ ಎರಡು ದಿನಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಲ್ಲಿ ಕಂಪನಿಯು ಸ್ಮಾರ್ಟ್ ರೋಬೋಟಿಕ್ಸ್ ಪ್ರಯೋಗಾಲಯ ಸ್ಥಾಪಿಸಲಿದೆ ಎಂದು ವಿವರಿಸಿದ್ದಾರೆ.

ಸುಸ್ಥಿರ ಮಾದರಿಯ ಕೈಗಾರಿಕಾ ಉತ್ಪಾದನೆಗೆ ಹೆಸರಾಗಿರುವ, ಸ್ವೀಡನ್ ಮೂಲದ ಅಟ್ಲಾಸ್ ಕಾಪ್ಕೋ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹೆಚ್.ಹೆಚ್.ವಿ. ಪಂಪ್ಸ್ ಕಂಪನಿಯನ್ನು 2021ರಲ್ಲೇ ಸ್ವಾಧೀನ ಪಡಿಸಿಕೊಂಡಿದೆ. ಈಗ ಕಂಪನಿಯು ರಾಜ್ಯದಲ್ಲಿ ತನ್ನ ಉತ್ಪಾದನಾ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳಲು ಬಯಸಿದೆ. ಹೀಗಾಗಿ ಕಂಪನಿಯ ಉನ್ನತಾಧಿಕಾರಿಗಳಿಗೆ ರಾಜ್ಯದ ಕೈಗಾರಿಕಾ ಕಾರ್ಯಪರಿಸರ, ನೀತಿ ನಿಯಮಗಳನ್ನು ಮನದಟ್ಟು ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಸರು ಮಾಡಿರುವ ಬೆಲ್-ರೈಸ್ ಇಂಡಸ್ಟ್ರೀಸ್, ಈಗಾಗಲೇ ಕೋಲಾರದ ನರಸಾಪುರ ಮತ್ತು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಘಟಕಗಳನ್ನು ಹೊಂದಿದೆ. ಇತ್ತೀಚೆಗೆ ಇದು ಹೆಚ್-ಒನ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಲು ತೀರ್ಮಾನಿಸಿದ್ದು, ಮೈಸೂರಿನಲ್ಲಿ 25 ಎಕರೆ ಭೂಮಿ ಕೇಳಿದೆ. ಇದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಫಿನೋಲೆಕ್ಸ್ ಕಂಪನಿಯು ಪಿವಿಸಿ ಪೈಪ್, ಬಿಡಿಭಾಗಗಳ ಉತ್ಪಾದನೆಗೆ ಹೆಸರಾಗಿದೆ. ಇದು ರಾಜ್ಯದಲ್ಲಿ ತನ್ನದೊಂದು ಘಟಕ ಸ್ಥಾಪಿಸಬೇಕು ಎನ್ನುವುದು ರಾಜ್ಯ ಸರ್ಕಾರದ ನಿರೀಕ್ಷೆಯಾಗಿದೆ. ಹಾಗೆಯೇ, ಫ್ಲೂಯಿಡ್ ಕಂಟ್ರೋಲ್ಸ್ ಲಿಮಿಟೆಡ್ 90 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದು, 5 ಎಕರೆ ಭೂಮಿ ಬೇಕೆಂದು ಕೇಳಿದೆ. ಇದನ್ನು ಕ್ಷಿಪ್ರವಾಗಿ ಈಡೇರಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here