Updated By: Priyalachhi
ಚಿಕ್ಕೋಡಿ, ಬೆಳಗಾವಿ: ಕಳೆದ ಏಳು ದಿನಗಳಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟ ಕೊನೆಗೊಳಿಸಲು ಸರ್ಕಾರದ ಪರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಬೆಳಗಾವಿಗೆ ಆಗಮಿಸಿ ಸಂಧಾನ ಮಾತುಕತೆ ನಡೆಸಿದರು. ನಾಳೆಯೇ ಸರ್ಕಾರ ಒಂದು ನಿರ್ಧಾರ ಪ್ರಕಟಿಸಬೇಕು ಎಂದು ರೈತರು ಪಟ್ಟು ಹಿಡಿದರು. ಆದರೆ, ಸಚಿವರು ಏಳನೇ ತಾರೀಖಿನವರೆಗೂ ಕಾಲಾವಕಾಶ ಕೇಳಿದರು. ಇದಕ್ಕೆ ಕಬ್ಬು ಬೆಳೆಗಾರರು ಒಪ್ಪದೇ ಇದ್ದಾಗ ಮಾತುಕತೆ ಮುರಿದು ಬಿತ್ತು. ಇದರಿಂದ ಆಕ್ರೋಶಗೊಂಡ ರೈತರು ಸಚಿವರ ಕಾರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿರುವ ಹೋರಾಟಗಾರರನ್ನು ಭೇಟಿ ಮಾಡಿ, ಸರ್ಕಾರ ಪರವಾಗಿ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್, ನೀವು ಅನೇಕ ವಿಚಾರಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೀರಿ. ಇದರಿಂದ ನಾಳೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ರೈತ ಮುಖಂಡರ ಜೊತೆ ಮಾತುಕತೆ ನಡೆಸಲಾಗುತ್ತದೆ, ಆ ಬಳಿಕ ಏಳನೇ ತಾರೀಖು ಸಕ್ಕರೆ ಕಾರ್ಖಾನೆ ಮಾಲಿಕರ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಇದಕ್ಕೆ ರೈತ ಮುಖಂಡರಾದ ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರುಜೀ ಮಾತನಾಡಿ, ನಾಳೆಯೇ ಸರ್ಕಾರ ಒಂದು ತೀರ್ಮಾನಕ್ಕೆ ಬರುವಂತೆ ಪಟ್ಟು ಹಿಡಿದರು. ಇದಕ್ಕೆ ಸಚಿವರು ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಹಾಗೂ ಏಳನೇ ತಾರೀಖು ನಿಮಗೆ ಅಂತಿಮವಾಗಿ ತೀರ್ಮಾನ ಹೇಳಲಾಗುವುದು ಎಂದು ಹೇಳಿದರು. ಇದಕ್ಕೆ ರೈತರು ಒಪ್ಪದೇ ಮಾತುಕತೆ ಮೊಟಕು ಗೊಂಡಿತು. ಇದರಿಂದ ರೊಚ್ಚಿಗೆದ್ದ ರೈತರು ಸಚಿವರು ತೆರಳುವ ಕಾರಿಗೆ ಅಡ್ಡಲಾಗಿ ಮಲಗಿ ಕಾರಿಗೆ ಮುತ್ತಿಗೆ ಹಾಕಿದರು. ಸ್ಥಳದಲ್ಲೇ ದೊಡ್ಡ ಹೈಡ್ರಾಮಾ ಸೃಷ್ಟಿ ಆಯಿತು. ತುರ್ತಾಗಿ ಪೋಲಿಸರು ಮದ್ಯೆ ಪ್ರವೇಶ ಮಾಡಿ ಸಚಿವರ ಕಾರು ತೆರಳುವುದಕ್ಕೆ ಅನುವು ಮಾಡಿಕೊಟ್ಟರು. ಇವತ್ತು ಯಾವುದೇ ಒಂದು ನಿರ್ಧಾರಕ್ಕೆ ಬರದೇ ಇರುವುದರಿಂದ ಕಬ್ಬು ಬೆಳೆಗಾರರಿಗೆ ನಿರಾಶೆ ಮೂಡಿಸಿದೆ
ಭಾನುವಾರ ಡಿಸಿ, ಎಸ್ಪಿಯೊಂದಿಗೆ ನಡೆದ ಸಂಧಾನ ಸಭೆಯೂ ವಿಫಲವಾಗಿತ್ತು: ಸಕ್ಕರೆ ಕಾರ್ಖಾನೆಗಳಿಂದ 3,500 ರೂ. ದರ ನೀಡುವಂತೆ ಒತ್ತಾಯಿಸಿ ರೈತರು ಗುರ್ಲಾಪುರ್ ಕ್ರಾಸ್ನಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಕಳೆದ ಭಾನುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರ ನೇತೃತ್ವದಲ್ಲಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಈ ಸಂಧಾನ ಸಭೆ ವಿಫಲವಾಗಿತ್ತು.
ಭಾನುವಾರ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಮತ್ತು ಎಸ್ಪಿ ಭೀಮಾಶಂಕರ್ ಗುಳೇದ್ ರೈತರು ಹಾಗೂ ರೈತ ಮುಖಂಡರ ಜೊತೆ ಸಂಧಾನ ಸಭೆ ನಡೆಸಿದ್ದರು.
ಈ ಕುರಿತಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಂದು ಮಾತನಾಡಿದ್ದರು. ರೈತರು ಜಿಲ್ಲೆಯಲ್ಲಿ ಬೃಹತ್ ಹೋರಾಟ ಮಾಡಿಕೊಂಡು ಬಂದಿದ್ದಾರೆ. ರೈತರ ಏಳಿಗೆಗಾಗಿ ನಾನು ಶ್ರಮಿಸುತ್ತೇನೆ. ಕಾರ್ಖಾನೆ ಮಾಲೀಕರ ಜೊತೆಗೆ ಸಭೆ ನಡೆಸಲಾಗಿತ್ತು. ಆದರೆ ಕಾರ್ಖಾನೆ ಮಾಲೀಕರು 3,200 ರೂ. ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ನಿಮ್ಮ ಜೊತೆ ನಾನು ನಿರಂತರವಾಗಿ ಇರುತ್ತೇನೆ. ನಿಮ್ಮ ಬೇಡಿಕೆಗೆ ನಾನು ಸ್ಪಂದನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ರೈತರು ಬೀದಿಯಲ್ಲಿ ಕೂರಬಾರದು. ನಾನು ರೈತ ಸ್ನೇಹಿ ಅಧಿಕಾರಿಯಾಗಿ ನಿಮಗೆ ಮನವಿ ಮಾಡಿಕೊಳ್ಳುತ್ತೇನೆ. ನೀವು ಈ ಪ್ರತಿಭಟನೆಯನ್ನು ಕೈ ಬಿಡಿ, ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ರೈತರು, ಡಿಸಿ ಅವರ ಮನವೊಲಿಕೆಗೆ ಬಗ್ಗದೇ ಪ್ರತಿಭಟನೆ ಮುಂದುವರೆಸಿದ್ದರು.



