Updated By: Priyalachhi
ಚಾಮರಾಜನಗರ: ನಾನು ಮೌಢ್ಯಗಳಲ್ಲಿ ನಂಬಿಕೆ ಇಟ್ಟಿಲ್ಲ. ನನಗೆ ಚಾಮರಾಜನಗರ, ಮೈಸೂರು ಎಲ್ಲವೂ ಒಂದೇ, ಇಲ್ಲಿಗೆ ಬಂದಾಗ ನನಗೆ ಅಧಿಕಾರ ಗಟ್ಟಿಯಾಗಿದೆ. ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಸ್ಥಾನ ಈಗಲೂ ಗಟ್ಟಿಯಾಗಿದೆ. ಮುಂದೆಯೂ ಗಟ್ಟಿಯಾಗಿರುತ್ತೆ ಎಂದು ಚಾಮರಾಜನಗರದ ಭೇಟಿ ಕುರಿತು ಹೇಳಿಕೆ ನೀಡಿದರು.
ಜನರ ಆಶೀರ್ವಾದ ಇರುವ ತನಕ ನಾನೇ ಸಿಎಂ: ಎರಡೂವರೆ ವರ್ಷ ಆದಮೇಲೆ ಸಂಪುಟ ಪುನಾರಚನೆ ಮಾಡೋಣ ಅಂದಿದ್ದೆ, ಆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದಕ್ಕೆ ಎಲ್ಲರೂ ಕ್ರಾಂತಿ ಅಂತ ತಿಳಿದುಕೊಂಡಿದ್ದರು. ಆದರೆ, ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಮತ್ತೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ, ಎಲ್ಲಿಯತನಕ ಜನರ ಆಶೀರ್ವಾದ ಇರುತ್ತೆ, ಅಲ್ಲಿ ತನಕ ನಾನೇ ಸಿಎಂ ಆಗಿರುತ್ತೇನೆ. 2028ರ ಚುನಾವಣೆಯಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ವಿಚಾರವನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡೋಣ ಎಂದು ತಿಳಿಸಿದರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಕುರಿತು ಮಾತನಾಡಿ, ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಿನ ಜಿಎಸ್ಟಿ ನೀಡುತ್ತೇವೆ. ಆದರೆ ಅನುದಾನ ಕೊಡುವ ವಿಚಾರದಲ್ಲಿ ಮಾತ್ರ ಸರಿಯಾಗಿ ಕೊಡುತ್ತಿಲ್ಲ. ಹೆಚ್ಚಿನ ಅನುದಾನ ಕೊಡಿ ಎಂದು ನಾನು ಕೇಳುತ್ತೇನೆ ಎಂದರು.
ಮೊಸರು ಕಡೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ: ಬಳಿಕ ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಮೊಸರು ಕಡೆಯುವ ಮೂಲಕ ವಿಶೇಷವಾಗಿ ಉದ್ಘಾಟಿಸಿದರು. ಈ ವೇಳೆ, ಪಕ್ಕದಲ್ಲೇ ಇದ್ದ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ, ತಾವು ಮೊಸರನ್ನು ಕಡೆದು ಬೆಣ್ಣೆ ತಿನ್ನುವ ಮೂಲಕ ಎಲ್ಲರ ಮೊಗದಲ್ಲೂ ನಗು ತರಿಸಿದರು.
ಸಿದ್ದರಾಮಯ್ಯರನ್ನು ಹಾಡಿಹೊಗಳಿದ ರಾಜಣ್ಣ: ಕಾರ್ಯಕ್ರಮದಲ್ಲಿ ಭಾಷಣದ ಆರಂಭದಲ್ಲೆ ನಾಡ ದೊರೆ ಸಿಎಂ ಸಿದ್ದರಾಮಯ್ಯನವರೇ ಎಂದು ಭಾಷಣ ಆರಂಭಿಸಿದ ಮಾಜಿ ಸಚಿವ ಕೆ.ಎನ್.ರಾಜಣ್ಣ, ಅನ್ನಭಾಗ್ಯ ಯೋಜನೆ ಮೂಲಕ ಬಡವರು ಹಸಿದಿರದಂತೆ ಸಿದ್ದರಾಮಯ್ಯ ಕ್ರಾಂತಿ ತಂದಿದ್ದಾರೆ. ಈ ಹಿಂದೆ ಸಾಕಷ್ಟು ಜನ ಭಿಕ್ಷುಕರು ಗ್ರಾಮಾಂತರ ಪ್ರದೇಶದಲ್ಲಿ ಕಂಡುಬರುತ್ತಿದ್ದರು. ಈಗ ಅವರು ಕಾಣುವುದು ಅಪರೂಪವಾಗಿದೆ, ಇದಕ್ಕೆ ಅನ್ನಭಾಗ್ಯ ಯೋಜನೆಯೂ ಕಾರಣ, ಎಲ್ಲರಿಗೂ ಹೊಟ್ಟೆತುಂಬಾ ಅನ್ನ ಸಿಗುತ್ತಿದೆ ಎಂದರು.



