Updated By: Priyalachhi
ಬೆಂಗಳೂರು: ಒಡಿಶಾದ ಕಲೆ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮವನ್ನು ಪರಿಚಯಿಸುವ ಒಡಿಶಾ ಪರಬ್ (ಹಬ್ಬ) ಕ್ಕೆ ಒಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರಿಂದ ಅದ್ಧೂರಿ ಚಾಲನೆ ದೊರೆತಿದೆ. ಬೆಂಗಳೂರು ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಇಂದಿನಿಂದ ನವೆಂಬರ್ 17ರ ವರೆಗೆ ನಡೆಯಲಿದೆ.
ಒಡಿಶಾದ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿರುವ ಮೂರು ದಿನಗಳ ಒಡಿಶಾ ಪರಬ್ನಲ್ಲಿ ಅಲ್ಲಿನ ಸಂಸ್ಕೃತಿ ಪರಂಪರೆ, ಆಹಾರ ಪದ್ಧತಿ ಹಾಗೂ ವೈವಿಧ್ಯಮಯ ಕರಕುಶಲ ವಸ್ತುಗಳ ಪ್ರದರ್ಶನ ಇರಲಿದೆ. ಒಡಿಸ್ಸಿ, ಗೋಟಿಪುವಾ, ಛೌ, ಸಂಬಲ್ ಪುರಿ ಮತ್ತು ಇನ್ನಿತರ ನೃತ್ಯ ಪ್ರಕಾರಗಳು ಒಳಗೊಂಡಂತೆ ಶಾಸ್ತ್ರೀಯ ಹಾಗೂ ಜಾನಪದ ಸಂಪ್ರದಾಯ ಬಿಂಬಿಸುವ ಪ್ರದರ್ಶನಗಳು ನಡೆಯಲಿವೆ ಎಂದು ಒಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಪ್ರವಾಸಿಗರನ್ನು ಆಕರ್ಷಿಸುವುದೇ ನಮ್ಮ ಧ್ಯೇಯ: ಬೆಂಗಳೂರಿನಲ್ಲಿ ಸುಮಾರು 15 ಲಕ್ಷ ಮಂದಿ ಒಡಿಶಾದ ಜನರಿದ್ದಾರೆ. ನಮ್ಮ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ. ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸಲು, ರಾಷ್ಟ್ರಮಟ್ಟದಲ್ಲಿ ತಿಳಿಸಲು ಈ ಬಾರಿ ಬೆಂಗಳೂರಿನಲ್ಲಿ ಒಡಿಶಾ ಪರಬ್ ಆಚರಿಸಲಾಗುತ್ತಿದೆ. ಇಲ್ಲಿನ ಜನರಿಗೆ ಒಡಿಶಾ ಸಾಂಸ್ಕೃತಿಕ ಹಾಗೂ ಪ್ರವಾಸಿ ಸ್ಥಳಗಳ ಪರಿಚಯಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವುದೇ ನಮ್ಮ ಧ್ಯೇಯ ಎಂದರು.
ಒಡಿಶಾ ಸಮೃದ್ಧ ಸಂಸ್ಕೃತಿ, ಸಂಪ್ರದಾಯಗಳ ಆಚರಣೆ, ಪ್ರವಾಸಿ ತಾಣಗಳಲ್ಲಿ ಹೂಡಿಕೆ ರಾಜ್ಯದ ಪಾಕಶೈಲಿ, ಹಸ್ತವಸ್ತ್ರ, ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ಒಡಿಶಾದ ಸಂಬಲ್ ಪುರಿ ಟೈ, ಮತ್ತು ಡೈ ಸೇರಿ ಟಸ್ಸರ್ ಹಾಗೂ ರೇಷ್ಮೆ ಬಟ್ಟೆಗಳು, ಬಸ್ತ್ರಾಲಯ ತರಹದ ಬಟ್ಟೆಗಳು, ವಿಶಿಷ್ಠ ಕರಕುಶಲ ವಸ್ತುಗಳಾದ ಧೆಂಕನಲ್ನ ಧೋಕ್ರಾ, ಪುರಿಯ ಪಟ್ಟಚಿತ್ರಗಳು, ಸೆಣಬಿನ ಕರುಕುಶಲ ವಸ್ತುಗಳು, ನಬರಂಗಪುರದ ಬುಡಕಟ್ಟು ಆಭರಣಗಳು ಸೇರಿದಂತೆ 30ಕ್ಕೂ ಹೆಚ್ಚು ತರಹೇವಾರಿ ವಸ್ತುಗಳನ್ನು ಒಡಿಶಾ ಪರಬ್ನಲ್ಲಿ ಅನಾವರಣಗೊಳಿಸಲಾವುದು ಎಂದು ಪರಿದಾ ಅವರು ತಿಳಿಸಿದರು.
ಮೋದಿ ಮೇಲೆ ನಂಬಿಕೆಯಿಟ್ಟು ಎನ್ಡಿಎ ಗೆಲ್ಲಿಸಿದ್ದಾರೆ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಅಮೋಘ ಗೆಲುವು ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಹಾರದ ಪ್ರಗತಿ ಕಂಡು ಮತದಾರರು ಎನ್ಡಿಎ ಮೈತ್ರಿಕೂಟವನ್ನು ಗೆಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆ ಇಡುವ ಜೊತೆಗೆ, ಕೇಂದ್ರ ಹಾಗೂ ಬಿಹಾರದಲ್ಲಿ ಡಬಲ್ ಇಂಜಿನ್ ಸರ್ಕಾರಗಳು ವಿಜಯಕ್ಕೆ ಪೂರಕವಾಗಿವೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಗಳ್ಳತನ ನಡೆಯುವುದು ಅಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.



