ಗ್ರಾಪಂಗಳಿಗೆ ಸಕಾಲದಲ್ಲಿ ಚುನಾವಣೆಗೆ ನಡೆಸಲು ಕೋರಿ ಚುನಾವಣಾ ಆಯೋಗದಿಂದ ಅರ್ಜಿ

0
30

Updated By: Priyalachhi

ಬೆಂಗಳೂರು: ಮುಂದಿನ ವರ್ಷ ಜವವರಿಯಲ್ಲಿ ರಾಜ್ಯದ 5,950 ಗ್ರಾಮ ಪಂಚಾಯಿತಿಗಳಿಗೆ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಸಕಾಲದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಆಯೋಗಕ್ಕೆ ಅನುಕೂಲವಾಗಲು ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ತಕ್ಷಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್​ ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಡಿಸೆಂಬರ್ 11ಕ್ಕೆ ವಿಚಾರಣೆ ಮುಂದೂಡಿಕೆ: ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಜನವರಿಯಲ್ಲಿ ಗ್ರಾ.ಪಂ.ಗಳ ಅವಧಿ ಮುಗಿಯಲಿದೆ. ಅವುಗಳಿಗೆ ಸಕಾಲದಲ್ಲಿ ಚುನಾವಣೆ ನಡೆಯಬೇಕು. ಚುನಾವಣೆ ನಡೆಯಲು ಮೀಸಲಾತಿ ನಿಗದಿಯಾಗಬೇಕು. ಒಟ್ಟು ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸದ ಹೊರತು ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಸಾಧ್ಯವಿಲ್ಲ. ಇದೊಂದು ಗಂಭೀರ ವಿಷಯವಾಗಿದ್ದು, ಸರ್ಕಾರದಿಂದ ಅಗತ್ಯ ಮಾಹಿತಿಗಳನ್ನು ಪಡೆದು ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ವಿವರಣೆ ನೀಡಬೇಕು ಎಂದು ಸರ್ಕಾರದ ಪರ ವಕೀಲರಿಗೆ ವಿವರಿಸಿದರು.

ಅಲ್ಲದೇ, ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಿತು.

ಅರ್ಜಿಯಲ್ಲೇನಿತ್ತು?: ರಾಜ್ಯದ ಗ್ರಾ.ಪಂ.ಗಳಿಗೆ 2020ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಅವುಗಳ ಅವಧಿ ಮುಂದಿನ ವರ್ಷ ಜನವರಿಯಲ್ಲಿ ಮುಕ್ತಾಯವಾಗಲಿದೆ. ಮುಂದಿನ ಅವಧಿಗೆ ಹೊಸದಾಗಿ ಚುನಾವಣೆ ನಡೆಸಬೇಕಾದರೆ ಮೀಸಲಾತಿ ನಿಗದಿಯಾಗಬೇಕು. ಗ್ರಾ.ಪಂ.ಗಳಿಗೆ ಮೀಸಲಾತಿ ನಿಗದಿಪಡಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅದೇ ರೀತಿ, ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಹೊಣೆಗಾರಿಕೆಯಾಗಿದೆ. ಮೀಸಲಾತಿ ಅಂತಿಮಗೊಳ್ಳುವ ತನಕ ಚುನಾವಣಾ ದಿನಾಂಕ ಘೋಷಿಸಲು ಸಾಧ್ಯವಿಲ್ಲ. ಆದ್ದರಿಂದ ಮೀಸಲಾತಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

sambrama prabha editor suresh kt

LEAVE A REPLY

Please enter your comment!
Please enter your name here