ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ದುರಂತ ಅಂತ್ಯ

0
22

Updated By: Priyalachhi

ಬೆಳಗಾವಿ : ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಅವರ ಸಂಬಂಧಿಕರು, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಹುಟ್ಟೂರು ರಾಮದುರ್ಗದಲ್ಲಿ ನೀರವಮೌನ ಆವರಿಸಿದ್ದು, ವಿಷಯ ತಿಳಿದು ಜನ ಅವರ ಮನೆಯತ್ತ ದೌಡಾಯಿಸಿದ್ದಾರೆ.

ಚಾಲಕನ‌ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಮೂವರು ದುರ್ಮರಣ ಹೊಂದಿರುವ ಘಟನೆ‌ ಮಂಗಳವಾರ ಕಲಬುರಗಿ ಜಿಲ್ಲೆಯ ಜೇವರ್ಗಿ ಹೊರವಲಯದ ಗೌನಳ್ಳಿ ಕ್ರಾಸ್ ಸಮೀಪ ನಡೆದಿದೆ.

ಮಹಾಂತೇಶ ಬೀಳಗಿ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಮಹಾಂತೇಶ ಅವರ ಚಿಕ್ಕಪ್ಪನ ಮಕ್ಕಳಾದ ಶಂಕರ್ ಬೀಳಗಿ ಮತ್ತು ಈರಣ್ಣ ಬೀಳಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾಂತೇಶ ಬೀಳಗಿ ಅವರ ಕಾರು ಚಾಲಕ ರಾಜು ಹಾಗೂ ಈರಣ್ಣ ಶಿರಸಂಗಿ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಮಹಾಂತೇಶ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು, ಸ್ನೇಹಿತರು, ಸಾರ್ವಜನಿಕರು ರಾಮದುರ್ಗದ ಅವರ ಮನೆ ಮುಂದೆ ಜಮಾಯಿಸಿದ್ದಾರೆ. ನಗರದಲ್ಲಿ ನೀರವಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅವರನ್ನು ನೆನೆದು ಕಣ್ಣೀರ ಸುರಿಸುತ್ತಿದ್ದಾರೆ.

ರಾಮದುರ್ಗದಲ್ಲಿಂದು ಸಾರ್ವಜನಿಕರಿಗೆ ಮಹಾಂತೇಶ ಅವರ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ರಾಮದುರ್ಗದ ರತ್ನ ಇಂದು ಮರೆಯಾಯಿತು. ನಮಗೆ ದೊಡ್ಡ ಆಘಾತ ಉಂಟಾಗಿದೆ. ಇಡೀ ರಾಮದುರ್ಗ ಸ್ತಬ್ಧವಾಗಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇತ್ತು. ಆದರೂ ಧೃತಿಗೆಡದೇ ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿ ಆಗಿದ್ದರು. ಸಾಕಷ್ಟು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ್ದರು. ತಂದೆ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡಿದ್ದರು. ತಾಯಿ ಕಷ್ಟಪಟ್ಟು ಬೆಳೆಸಿದ್ದರು‌‌. ಬಡವರಿಗೆ ಸಹಾಯ ಮಾಡಲು ಸದಾಸಿದ್ಧ ಹಸ್ತರಾಗಿದ್ದರು‌ ಎಂದು ರಾಮದುರ್ಗ ಸಿ.ಎಸ್.ಬೆಂಬಳಗಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ಎಂ.ಸಾಕ್ರಿ ನೋವು ತೋಡಿಕೊಂಡರು.

ಮಹಾಂತೇಶ ಅವರ ಸ್ನೇಹಿತ ಹಿರಿಯ ಐಎಎಸ್ ಅಧಿಕಾರಿ ಶಿವಾನಂದ ಕಾಪಶಿ ಅವರು ಮಾತನಾಡಿ, ಘಟನೆ ನಿಜಕ್ಕೂ ನಂಬಲು ಆಗುತ್ತಿಲ್ಲ. ನಮಗೆಲ್ಲಾ ಬಹಳಷ್ಟು ನೋವಾಗಿದೆ. ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರಲ್ಲಿದ್ದ ಜೀವನೋತ್ಸಾಹ ಯಾರಲ್ಲಿಯೂ ಕಾಣಲು ಸಾಧ್ಯವಿಲ್ಲ. ಅಪರೂಪದ ವ್ಯಕ್ತಿತ್ವ. ಅಪ್ಪಟ ಬಸವತತ್ವ ನಿಷ್ಠರು, ಉತ್ತಮವಾಗ್ಮಿಗಳು, ಯುವಕರಿಗೆ ಸ್ಫೂರ್ತಿದಾಯಕ ನುಡಿಗಳನ್ನಾಡುತ್ತಿದ್ದರು. ಕೆಎಎಸ್, ಐಎಎಸ್ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ನೆನಪಿಸಿಕೊಂಡರು.‌

ರಾಮದುರ್ಗದಲ್ಲಿ ಪದವಿವರೆಗೆ ಶಿಕ್ಷಣ ಪೂರ್ಣಗೊಳಿಸಿದ್ದ ಮಹಾಂತೇಶ ಅವರು ಪದವಿಯಲ್ಲಿ ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದರು. ಮುಂದೆ ಧಾರವಾಡ ಕರ್ನಾಟಕ‌ ವಿಶ್ವವಿದ್ಯಾಲಯದಲ್ಲಿ ಎಂಎ ಇಂಗ್ಲೀಷ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. 2012ರ ಕೆಎಎಸ್ ಬ್ಯಾಚ್​ನಲ್ಲಿ ಆಯ್ಕೆಯಾಗಿದ್ದ ಮಹಾಂತೇಶ ಬೀಳಗಿ ಅವರು ಧಾರವಾಡ ಎಸಿ ಆಗಿ ಸೇವೆ ಆರಂಭಿಸಿದರು. ನಂತರ ಧಾರವಾಡ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ, ದಾವಣಗೆರೆ ಎಸಿ, ಹಾವೇರಿ ಜಿ.ಪಂ‌. ಉಪ ಕಾರ್ಯದರ್ಶಿ, ಬೀದರ ಜಿ.ಪಂ.ಸಿಇಒ, ದಾವಣಗೆರೆ ಜಿಲ್ಲಾಧಿಕಾರಿ, ಬೆಸ್ಕಾಂ ಎಂಡಿ, ಸದ್ಯ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ರಾಮದುರ್ಗ ತಲುಪಿದ ಪಾರ್ಥಿವ ಶರೀರ: ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರ ರಾಮದುರ್ಗಕ್ಕೆ ತಲುಪಿದ್ದು, ಇಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮಹಾಂತೇಶ ಅವರ ದುರ್ಮರಣ ಅವರ ಹುಟ್ಟೂರು ರಾಮದುರ್ಗ ಅಷ್ಟೇ ಅಲ್ಲದೇ ಇಡೀ ರಾಜ್ಯವನ್ನೆ ದುಃಖದ ಮಡುವಿನಲ್ಲಿ ತೇಲುವಂತೆ ಮಾಡಿದೆ. ಪ್ರತಿಯೊಬ್ಬರು ಮರುಕ ಪಡುತ್ತಿದ್ದಾರೆ. ತಮ್ಮ ವಾಟ್ಸ್​ಆ್ಯಪ್​, ಫೇಸಬುಕ್​ನಲ್ಲಿ ಸ್ಟೇಟಸ್ ಇಟ್ಟುಕೊಂಡು ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ರಾಮದುರ್ಗದಲ್ಲಿ ನೋವಿನ ನಡುವೆಯೂ ಮುಂದಿನ ಕ್ರಿಯೆಗಳಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ.

ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾಮದುರ್ಗದತ್ತ ಜನರ ದಂಡೇ ಹರಿದು ಬರುತ್ತಿದೆ. ಬೆಂಗಳೂರಿನಿಂದ ಅವರ ಪತ್ನಿ ಮತ್ತು ಮಗಳು ಕೂಡ ರಾಮದುರ್ಗಕ್ಕೆ ಆಗಮಿಸಿದ್ದು, ಅಂತ್ಯಕ್ರಿಯೆ ಎಲ್ಲಿ ಮಾಡಬೇಕು? ಹಾಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.

ಕಳೆದ ಏಳೆಂಟು ತಿಂಗಳ ಹಿಂದೆ ಅವರ ತಾಯಿ ನಿಧನರಾದಾಗ ಅವರ ತೋಟದಲ್ಲಿ ಅಂತ್ಯಕ್ರಿಯೆಯನ್ನು ಮಾಡಲಾಗಿತ್ತು. ಈಗ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಲು ನಿಶ್ಚಯಿಸಲಾಗಿದೆ. ದುರ್ಮರಣ ಇಡೀ ರಾಜ್ಯಕ್ಕೆ ಆಘಾತ. ಇನ್ನೂ ರಾಜ್ಯಕ್ಕೆ ದೊಡ್ಡ ಕೊಡುಗೆ ಕೊಡುವವರಿದ್ದರು. ಹೆಚ್ಚಿನ ಸೇವೆ ಮಾಡುವ ಬಯಕೆ ವ್ಯಕ್ತಪಡಿಸಿದ್ದರು. ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here