Updated By: Priyalachhi
ಬೆಂಗಳೂರು: ಹಸಿರೇ ಉಸಿರು ಎಂದು ಬದುಕಿ ಬಾಳಿದ ಶತಾಯುಷಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಸಾಲುಮರದ ತಿಮ್ಮಕ್ಕ ಅವರ ಅಂತ್ಯಸಂಸ್ಕಾರವು ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಶನಿವಾರ ನಡೆಯಿತು. ಕವಿ ಸಿದ್ದಲಿಂಗಯ್ಯ ಸಮಾಧಿ ಪಕ್ಕದಲ್ಲಿ ಗುರುತಿಸಲಾಗಿದ್ದ ಸ್ಥಳದಲ್ಲಿ ಅಂತ್ಯಕ್ರಿಯೆ ನೇರವೇರಿತು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ, ಸಕಲ ಸರ್ಕಾರಿ ಗೌರವದೊಂದಿಗೆ ವೃಕ್ಷಮಾತೆಯನ್ನು ಬೀಳ್ಕೊಟ್ಟರು.
ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಅವರು ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿದರು. ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಲಾಗಿತ್ತು. ಈ ವೇಳೆ ನೆರೆದಿದ್ದ ತಿಮ್ಮಕ್ಕ ಅವರ ಕುಟುಂಬಸ್ಥರು, ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದರು. ಇದಕ್ಕೂ ಮುನ್ನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿತ್ತು. ಗೃಹ ಸಚಿವ ಜಿ. ಪರಮೇಶ್ವರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ನಟ ಮಾಸ್ಟರ್ ಆನಂದ್ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು.
ಅಪಾರವಾದ ನಷ್ಟ: ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಪರಮೇಶ್ವರ್, ಇಡೀ ನಾಡಿಗೆ ಹೊಸ ಆದರ್ಶವನ್ನು ರೂಪಿಸಿದ ಎಲ್ಲರ ಅಚ್ಚುಮೆಚ್ಚಿನ ತಾಯಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರು ನಮ್ಮನ್ನು ಅಗಲಿರುವುದು ನೋವಾಗಿದೆ. ತಿಮ್ಮಕ್ಕನವರ ಅಗಲಿಕೆಯು ವೈಯಕ್ತಿಕವಾಗಿ ನನಗೆ ಅಪಾರವಾದ ನಷ್ಟವಾಗಿದೆ. ಅವರು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದವರು. ಬಹುಶಃ ಯಾರು ಕೂಡ ನಡೆಯದ ದಾರಿಯನ್ನು ಸೃಷ್ಟಿ ಮಾಡಿ, ಪರಿಸರ ಸಂರಕ್ಷಣೆಯ ಮಾತನ್ನು, ಕೃತಿಯಲ್ಲಿ ಮಾಡಿ ತೋರಿಸಿದವರು. ಅತ್ಯಂತ ಬಡ ಕುಟುಂಬದಿಂದ ಬಂದಂತಹ ತಿಮ್ಮಕ್ಕ, ಮಕ್ಕಳಿಲ್ಲ ಎಂಬ ಕಾರಣಕ್ಕಾಗಿ ಗಿಡಗಳನ್ನು ನೆಡುವ ಮೂಲಕ ಅವೇ ತನ್ನ ಮಕ್ಕಳೆಂದು ಸಾಕಿದರು ಎಂದು ನೆನೆದರು.
ಜಗತ್ತಿಗೆ, ಪರಿಸರ ಕ್ಷೇತ್ರಕ್ಕೆ ಆದರ್ಶವನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದ ಅತಿದೊಡ್ಡ ಸಮಾವೇಶದಲ್ಲಿ, ಜಗತ್ತಿನಲ್ಲಿ ಪರಿಸರ ಹಾಳಾಗುತ್ತದೆ. ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ ಎಂಬ ಚರ್ಚೆಗಳಾದವು. ಇದ್ಯಾವುದರ ಅರಿವಿಲ್ಲದೆ, ಪರಿಸರ ಸಂರಕ್ಷಣೆಯ ಸಂದೇಶವನ್ನು ತಿಮ್ಮಕ್ಕನವರು ಜಗತ್ತಿಗೆ ಕೊಟ್ಟಿದ್ದಾರೆ. ಅವರು ನಮ್ಮನ್ನು ಅಗಲಿರುವುದು ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಸಾಕುಮಗ ಉಮೇಶ್ ಆ ತಾಯಿಯನ್ನು ಕಾಳಜಿಯಿಂದ ಸಾಕಿದ್ದಾನೆ. ಸರ್ಕಾರ ಎಲ್ಲ ರೀತಿಯ ಗೌರವಗಳನ್ನು ಸಮರ್ಪಣೆ ಮಾಡಲಿದೆ ಎಂದು ಹೇಳಿದರು.



