Updated By: Priyalachhi
ಮುಂಬೈ: ರಾಜಕೀಯದಲ್ಲಿ ಯಾರು ಶಾಶ್ವತವಾಗಿ ಶತ್ರುಗಳಲ್ಲ ಯಾರು ಶಾಶ್ವತವಾಗಿ ಮಿತ್ರರಲ್ಲ ಎಂಬ ಮಾತು ಅಕ್ಷರಶಃ ನಿಜವಾಗಿದ್ದು, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್ನಾಥ್ ಪುರಸಭೆಯಲ್ಲಿ ಬದ್ಧವೈರಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಬುಧವಾರ ತನ್ನ 12 ಹೊಸ ಕೌನ್ಸಿಲರ್‌ಗಳನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಈ ಮೈತ್ರಿ “ಸಂಪೂರ್ಣವಾಗಿ ತಪ್ಪು ಕ್ರಮ” ಎಂದು ಕರೆದ ಮಹಾರಾಷ್ಟ್ರ ಕಾಂಗ್ರೆಸ್, ಅಂಬರ್ನಾಥ್ ಬ್ಲಾಕ್ ಸಮಿತಿಯನ್ನು ವಿಸರ್ಜಿಸಿ ಅದರ ಅಧ್ಯಕ್ಷ ಮತ್ತು ಪಕ್ಷದ ಹಿರಿಯ ನಾಯಕ ಪ್ರದೀಪ್ ಪಾಟೀಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ್ ಪಾಟೀಲ್ ಅವರು, ಈ ಸಂಬಂಧ ಪ್ರದೀಪ್ ಅವರಿಗೆ ಪತ್ರ ಬರೆದಿದ್ದು, “ಇದು ಸಂಪೂರ್ಣವಾಗಿ ತಪ್ಪು ಕ್ರಮ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ಈ ವಿಷಯವನ್ನು ಪರಿಗಣಿಸಿ, ಗೌರವಾನ್ವಿತ ರಾಜ್ಯ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರ ಆದೇಶದ ಮೇರೆಗೆ, ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇದಲ್ಲದೆ, ನಿಮ್ಮ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗುತ್ತಿದೆ. ಅದೇ ರೀತಿ, ನಿಮ್ಮೊಂದಿಗೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಎಲ್ಲಾ ಕಾರ್ಪೊರೇಟರ್‌ಗಳನ್ನು ಸಹ ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ” ಎಂದು ಹೇಳಿದ್ದಾರೆ.



