ಕಾರವಾರಕ್ಕೆ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

0
42

Updated By: Priyalachhi

​ಕಾರವಾರ: ರಾಷ್ಟ್ರಪತಿ, ಭಾರತದ ಸಶಸ್ತ್ರ ಪಡೆಗಳ ಮಹಾದಂಡನಾಯಕಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 28ರ ಭಾನುವಾರ ಕಾರವಾರದ ಕದಂಬ ನೌಕಾನೆಲೆಗೆ ಐತಿಹಾಸಿಕ ಭೇಟಿ ನೀಡಲಿದ್ದಾರೆ. ಏಷ್ಯಾದ ಅತಿದೊಡ್ಡ ನೌಕಾನೆಲೆಯಾಗಿ ಅಭಿವೃದ್ಧಿ ಹೊಂದುತ್ತಿರುವ ‘ಸೀಬರ್ಡ್’ಗೆ ರಾಷ್ಟ್ರಪತಿಗಳು ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಕರಾವಳಿಯಲ್ಲಿ ಬಿಗಿ ಭದ್ರತೆ ಹಾಗೂ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

​ಜಲಾಂತರ್ಗಾಮಿಯಲ್ಲಿ ಸಮುದ್ರಯಾನ: ​ರಾಷ್ಟ್ರಪತಿಗಳ ಕಾರ್ಯಾಲಯದ ಪ್ರಕಟಣೆಯಂತೆ, ಡಿ. 27ರಂದು ಗೋವಾಕ್ಕೆ ಆಗಮಿಸಲಿರುವ ರಾಷ್ಟ್ರಪತಿಗಳು, ಡಿ. 28ರಂದು ಬೆಳಗ್ಗೆ ಕಾರವಾರಕ್ಕೆ ಬರಲಿದ್ದಾರೆ. ಕಾರವಾರದ ನೌಕಾ ದಕ್ಕೆಯಿಂದ ಜಲಾಂತರ್ಗಾಮಿಯೊಂದರಲ್ಲಿ (Submarine) ಸಮುದ್ರಯಾನ (Sea Sortie) ಕೈಗೊಳ್ಳಲಿರುವುದು ಈ ಭೇಟಿಯ ವಿಶೇಷವಾಗಿದೆ. ಮಧ್ಯಾಹ್ನದ ನಂತರ ಅವರು ಕಾರವಾರದಿಂದ ನಿರ್ಗಮಿಸಲಿದ್ದು, ಡಿ. 29ರಂದು ಜಾರ್ಖಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

​ರಾಜ್ಯಪಾಲರಿಂದ ಸ್ವಾಗತ: ​ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಕರ್ನಾಟಕದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಕಾರವಾರಕ್ಕೆ ಆಗಮಿಸಲಿದ್ದಾರೆ. ನೌಕಾಸೇನೆಯ ಅಧಿಕೃತ ಕಾರ್ಯಕ್ರಮ ಇದಾಗಿರುವುದರಿಂದ, ನೌಕಾನೆಲೆಯ ಹಿರಿಯ ಅಧಿಕಾರಿಗಳು ಹಾಗೂ ಪಿಆರ್‌ಒ ಅರವಿಂದ್ ನೇತೃತ್ವದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

​ಮೀನುಗಾರಿಕೆ ನಿಷೇಧ ಮತ್ತು ಭದ್ರತೆ: ​ರಾಷ್ಟ್ರಪತಿಗಳ ಭೇಟಿಯ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಡಿಸೆಂಬರ್ 28ರ ಬೆಳಗ್ಗೆಯಿಂದ ಮಧ್ಯಾಹ್ನ 3:30ರ ವರೆಗೆ ಕಾರವಾರದ ಮಾಜಾಳಿಯಿಂದ ಹಾರವಾಡದವರೆಗೆ ಸಮುದ್ರದಲ್ಲಿ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here