Updated By: Priyalachhi
ಬೆಂಗಳೂರು: ಮನರೇಗಾ ಮತ್ತು ವಿಬಿ ಜಿರಾಮ್ ಜಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ಸಂಘಪ್ಪ ಎಂದು ಉಲ್ಲೇಖಿಸಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ಬಳಕೆ ಮಾಡಿ ಜಾಹೀರಾತು ನೀಡಿತ್ತು. ಇದೀಗ ಬಿಜೆಪಿ ನುಂಗಪ್ಪ ಎಂಬ ಜಾಹೀರಾತು ಮೂಲಕ ತಿರುಗೇಟು ನೀಡಿದೆ.

ಬಿಜೆಪಿ ಜಾಹೀರಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರು, ಸತ್ಯ, ಅಹಿಂಸೆ, ಸಹಿಷ್ಣುತೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧಿ ಅವರನ್ನು ಕೊಂದ ಸಂಸ್ಕೃತಿಯವರ ಮಾನಸಿಕ ಕ್ರೌರ್ಯ ಮುಂದುವರೆಯುತ್ತಲೇ ಇದೆ. ಮಹಾತ್ಮ ಗಾಂಧಿಯನ್ನು ಅವಮಾನಿಸುವ, ಹೀಯಾಳಿಸುವ ಹೀನ ಮನಸ್ಥಿಯನ್ನೇ ಇಂದು ಪತ್ರಿಕೆಗಳ ಮೂಲಕ ಜಾಹೀರಾತುಗಳಲ್ಲಿ ಬಿಜೆಪಿ ಪ್ರಕಟಿಸಿದೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕ್ರೌರ್ಯ, ಕೊಲೆ, ಹಿಂಸೆ, ದೌರ್ಜನ್ಯ, ಗೂಂಡಾಗಿರಿಯನ್ನೇ ಬದುಕನ್ನಾಗಿಸಿಕೊಂಡಿರುವ ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷ ಗಾಂಧಿ ಅವರ ಊರುಗೋಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಡೆಯಲು ಹೋಗುವಂತೆ ಚಿತ್ರಿಸುವ ಜಾಹೀರಾತು ನೀಡುವ ಮೂಲಕ ಗಾಂಧಿಯವರ ಅಹಿಂಸಾ ತತ್ವವನ್ನೇ ಅವಮಾನಿಸಿದೆ ಎಂದಿದ್ದಾರೆ.



