Updated By: Priyalachhi
ಬೆಂಗಳೂರು: ಮಹಾರಾಷ್ಟ್ರದ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ATNF) ಪೊಲೀಸರು, ನಮ್ಮ ಪೊಲೀಸರು, ಎನ್‌ಸಿಬಿ ಅಧಿಕಾರಿಗಳು ಹಾಗೂ ಸೋಕೋ (Scene of Crime Officers) ತಂಡದ ಅಧಿಕಾರಿಗಳ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ ಮಾತನಾಡಿದರು.
ಹೊಸ ವರ್ಷ ಸಮೀಪಿಸುತ್ತಿರುವುದರಿಂದ ಡ್ರಗ್ಸ್ ದಂಧೆಯ ವಿರುದ್ಧ ಅಕ್ಟೋಬರ್, ನವೆಂಬರ್ ತಿಂಗಳಿಂದ ಪೊಲೀಸರು ರಾಜ್ಯದಾದ್ಯಂತ ಹೆಚ್ಚಿನ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. ನಿನ್ನೆ ಮಹಾರಾಷ್ಟ್ರ ಪೊಲೀಸರು ಮುಂಬೈನಲ್ಲಿ ಸಿಕ್ಕ ಆರೋಪಿಯ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಆರೋಪಿಯೊಬ್ಬನನ್ನು ಹಿಡಿದಿದ್ದಾರೆ ಎಂದು ಹೇಳಿದರು.
ಮುಂಬೈ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಡ್ರಗ್ಸ್ ತಯಾರಿಸಲು ಬೇಕಾದ ಮೆಫೆಡ್ರಿನ್ ಎಂಬ ಕೆಮಿಕಲ್ ಸಂಗ್ರಹಿಸಿಟ್ಟುಕೊಂಡಿದ್ದ. ಮುಂಬೈನಲ್ಲಿ ಸಿಕ್ಕಿದ್ದ ಆರೋಪಿಯು ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರ ಪೊಲೀಸ್, ಮುಂಬೈ ಪೊಲೀಸ್, ಎನ್‌ಸಿಬಿ, ಸೋಕೋ ಟೀಮ್‌ನವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ಏನು ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳು ಸರಿಯಲ್ಲ ಎಂದರು.
58 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾಹಿತಿ. ಪತ್ತೆಯಾಗಿರುವ ಡ್ರಗ್ಸ್ ಕೆಮಿಕಲ್ ಮೌಲ್ಯ 1 ಕೆಜಿಗೆ 30 ಲಕ್ಷ ರೂ. ಬೆಲೆಬಾಳುತ್ತದೆ. ಒಟ್ಟು 4 ಕೆಜಿಗೆ 1.20 ಕೋಟಿ ರೂ. ಮೌಲ್ಯವಾಗುತ್ತದೆ ಎಂದ ಅವರು, ಮೈಸೂರು ಘಟನೆಯ ಬಳಿಕ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಡ್ರಗ್ಸ್ ದಂಧೆಯ ವಿರುದ್ಧ ಅಕ್ಟೋಬರ್‌ನಿಂದ ಹೆಚ್ಚಿನ ರೀತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.



