Updated By: Priyalachhi
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ಅವರು ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ಬಹಿರಂಗಪಡಿಸಿವೆ ಅವರಿಗೆ 67 ವರ್ಷ ವಯಸ್ಸಾಗಿತ್ತು. ಇಂದು ಬೆಳಗಿನ ಜಾವ ಶ್ರೀನಿವಾಸನ್ ಅವರ ತಮ್ಮ ನಿವಾಸದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಘಟನೆ ವೇಳೆ ಪತ್ನಿ ಉಷಾ ಮನೆಯಲ್ಲಿ ಇರಲಿಲ್ಲ. ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಿಂದಾಗಿ ಅವರು ದೆಹಲಿಗೆ ತೆರಳಿದ್ದರು. ಸದ್ಯ ವಿಷಯ ತಿಳಿದ ಕೂಡಲೇ ಉಷಾ ಮನೆಗೆ ಮರಳಿದ್ದಾರೆ. ಅಂತ್ಯಕ್ರಿಯೆಯ ಸಮಯ ನಿಗದಿಯಾಗಿಲ್ಲ. ಶ್ರೀನಿವಾಸನ್ ಪೊನ್ನಾನಿಯ ಕುಟ್ಟಿಕ್ಕಾಡ್‌ನ ವೆಂಗಲಿ ತರವಟ್ಟಿಯ ನಾರಾಯಣ ಮತ್ತು ಸರೋಜಿನಿ ದಂಪತಿಯ ಪುತ್ರರಾಗಿದ್ದರು. ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ನಿವೃತ್ತ ಡಿವೈಎಸ್ಪಿ ಆಗಿಯೂ ಸೇವೆ ಸಲ್ಲಿಸಿದ್ದಾರೆ. 1991ರಲ್ಲಿ ತಮ್ಮ ದೂರದ ಸಂಬಂಧಿಯಾದ ಪಿಟಿ ಉಷಾ ಅವರನ್ನು ವಿವಾಹವಾದರು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಮಗನಿದ್ದಾನೆ.



