Updated By: Priyalachhi
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆಯ ಸತತ 9ನೇ ಬಜೆಟ್ ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ, ಎಲ್ಲರ ಕಣ್ಣುಗಳು ಬಹುನಿರೀಕ್ಷಿತ ಕಸ್ಟಮ್ಸ್ ಸುಧಾರಣೆಗಳ ಮೇಲೆ ಬಿದ್ದಿವೆ.
ಸೀತಾರಾಮನ್ ಅವರು 2019 ರಲ್ಲಿ ಮೊದಲ ಬಜೆಟ್ ಮಂಡಿಸಿದರು. ಈ ವೇಳೆ, ಅವರು ಬಜೆಟ್ ದಾಖಲೆಗಳನ್ನು ಸಾಗಿಸಲು ದಶಕಗಳಿಂದ ಬಳಸಲಾಗುತ್ತಿದ್ದ ಚರ್ಮದ ಬ್ರೀಫ್ಕೇಸ್ ಬದಲಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ ‘ಬಹಿ-ಖಾತಾ’ಕ್ಕೆ ಬದಲಾಯಿಸಿದರು. ಇದಾದ ಬಳಿಕ, ಕಳೆದ ನಾಲ್ಕು ವರ್ಷಗಳಿಂದ ಬಜೆಟ್ ಅನ್ನು ಕಾಗದರಹಿತ ಅಥವಾ ಡಿಜಿಟಲ್ ರೂಪದಲ್ಲಿ ಮಂಡಿಸುತ್ತಿದ್ದಾರೆ.
2025-26 ರ ಕೇಂದ್ರ ಬಜೆಟ್ನಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳು
ಹಣಕಾಸಿನ ಕೊರತೆ: ಪ್ರಸ್ತುತ ಹಣಕಾಸು ವರ್ಷದಲ್ಲಿ (ಏಪ್ರಿಲ್ 2025 ರಿಂದ ಮಾರ್ಚ್ 2026) ಸರ್ಕಾರದ ವೆಚ್ಚ ಮತ್ತು ಆದಾಯದ ಅನುಸಾರ ಹಣಕಾಸಿನ ಕೊರತೆಯು ಜಿಡಿಪಿಯ ಶೇಕಡಾ 4.4 ಎಂದು ಅಂದಾಜಿಸಲಾಗಿದೆ.
2026ನೇ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ (GDP) ಶೇಕಡಾ 4.5 ಕ್ಕಿಂತ ಕಡಿಮೆ ಕೊರತೆಯೊಂದಿಗೆ ಹಣಕಾಸಿನ ಬಲವರ್ಧನೆಯ ಮಾರ್ಗಸೂಚಿಯನ್ನು ಸಾಧಿಸಲಾಗಿದೆ. ಇದು 2027ನೇ ಹಣಕಾಸು ವರ್ಷದಲ್ಲಿ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ದೇಶದ ಜಿಡಿಪಿಯ ಶೇಕಡಾ 4 ರಷ್ಟು ಹಣಕಾಸಿನ ಕೊರತೆ ಘೋಷಿಸುವ ಸಾಧ್ಯತೆ ಇದೆ.
ಬಂಡವಾಳ ವೆಚ್ಚ: ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಯೋಜಿತ ಬಂಡವಾಳ ವೆಚ್ಚ 11.2 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಖಾಸಗಿ ವಲಯದ ಉತ್ತಮ ಬೆಳವಣಿಗೆಯಿಂದಾಗಿ ಮುಂದಿನ ಹಣಕಾಸು ವರ್ಷಕ್ಕೆ ಶೇಕಡಾ 10-15 ರಷ್ಟು ಹೆಚ್ಚಳ ಮಾಡುವ ನಿರೀಕ್ಷೆ ಇದೆ.
ಸಾಲದ ಮಾರ್ಗಸೂಚಿ: 2024-25ರ ಬಜೆಟ್ ಭಾಷಣದಲ್ಲಿ, 2026-27 ರಿಂದ ಕೇಂದ್ರ ಸರ್ಕಾರದ ಸಾಲವು GDP ಯ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗುವ ರೀತಿಯಲ್ಲಿ ಹಣಕಾಸಿನ ಕೊರತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಸರ್ಕಾರದ ಸಾಲದ ಪ್ರಮಾಣ ಶೇಕಡಾ 60ಕ್ಕೆ ಇಳಿಸಲು ಪ್ರಯತ್ನ ನಡೆಯಲಿದೆ. 2024ರ ಹಣಕಾಸು ವರ್ಷದಲ್ಲಿ ಸರ್ಕಾರದ ಸಾಲದ ಪ್ರಮಾಣ ಶೇಕಡಾ 85 ರಷ್ಟಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇಕಡಾ 57 ರಷ್ಟಿತ್ತು.
ಸಾಲ ಪಡೆಯುವುದು: 2026ರ ಹಣಕಾಸುವ ವರ್ಷದಲ್ಲಿ ಸರ್ಕಾರದ ಒಟ್ಟು ಸಾಲದ ಬಜೆಟ್ 14.80 ಲಕ್ಷ ಕೋಟಿ ರೂಪಾಯಿ. ಸರ್ಕಾರವು ತನ್ನ ಹಣಕಾಸಿನ ಕೊರತೆಯನ್ನು ನೀಗಿಸಲು ಮಾರುಕಟ್ಟೆಯಿಂದ ಸಾಲ ಪಡೆಯುತ್ತದೆ. ಸಾಲ ಪಡೆಯುವ ಸಂಖ್ಯೆಯನ್ನು ಮಾರುಕಟ್ಟೆಯು ವೀಕ್ಷಿಸುತ್ತದೆ. ಏಕೆಂದರೆ, ಅದು ದೇಶದ ಹಣಕಾಸಿನ ಆರೋಗ್ಯದ ಅರ್ಥವನ್ನು ನೀಡುತ್ತದೆ.
ತೆರಿಗೆ ಆದಾಯ: 2025-26 ರ ಬಜೆಟ್ ಒಟ್ಟು ತೆರಿಗೆ ಆದಾಯವನ್ನು 42.70 ಲಕ್ಷ ಕೋಟಿ ರೂಪಾಯಿ ನಿರೀಕ್ಷಿಸಿತ್ತು. ಇದು 2025ರ ಹಣಕಾಸು ವರ್ಷಕ್ಕಿಂತ 11 ಪ್ರತಿಶತ ಹೆಚ್ಚು. ಇದರಲ್ಲಿ ನೇರ ತೆರಿಗೆಗಳಿಂದ (ವೈಯಕ್ತಿಕ ಆದಾಯ ತೆರಿಗೆ + ಕಾರ್ಪೊರೇಟ್ ತೆರಿಗೆ) ಬರುವ ಅಂದಾಜು 25.20 ಲಕ್ಷ ಕೋಟಿ ರೂ.ಗಳು ಮತ್ತು ಪರೋಕ್ಷ ತೆರಿಗೆಗಳಿಂದ (ಕಸ್ಟಮ್ಸ್ + ಅಬಕಾರಿ ಸುಂಕ + ಜಿಎಸ್ಟಿ) 17.5 ಲಕ್ಷ ಕೋಟಿ ರೂಪಾಯಿ ಇದೆ.
ಜಿಎಸ್ಟಿ: 2025-26 ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇ. 11 ರಷ್ಟು ಏರಿಕೆಯಾಗಿ 11.78 ಲಕ್ಷ ಕೋಟಿ ರೂ.ಗಳಿಗೆ ತಲುಪುವ ನಿರೀಕ್ಷೆಯಿದೆ. 2027ರ ಹಣಕಾಸು ವರ್ಷದಲ್ಲಿ ಜಿಎಸ್ಟಿ ಆದಾಯವನ್ನು ಮತ್ತಷ್ಟು ನಿರೀಕ್ಷಿಸಲಾಗಿದೆ. ಕಾರಣ, 2025ರ ಸೆಪ್ಟೆಂಬರ್ನಿಂದ ಜಿಎಸ್ಟಿ ದರ ಕಡಿತ ಮಾಡಲಾಗಿದೆ. ಇದು ಆರ್ಥಿಕ ಬೆಳವಣಿಗೆ ಕಾರಣವಾಗುವ ಸಾಧ್ಯತೆ ಇದೆ.
ಜಿಡಿಪಿ ಬೆಳವಣಿಗೆ: 2026 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ 10.1 ಪ್ರತಿಶತ ಎಂದು ಅಂದಾಜಿಸಲಾಗಿದೆ. ಆದರೆ NSO ಅಂದಾಜಿಸಿರುವ ನೈಜ ಜಿಡಿಪಿ ಬೆಳವಣಿಗೆ 7.4 ಪ್ರತಿಶತ. ಆದಾಗ್ಯೂ, ಬಜೆಟ್ ಸಮಯದಲ್ಲಿ ಹಣದುಬ್ಬರವು ಅಂದಾಜಿಗಿಂತ ಕಡಿಮೆಯಾದ ಕಾರಣ ನೈಜ ಜಿಡಿಪಿಯನ್ನು ಶೇಕಡಾ 8 ಕ್ಕೆ ಇಳಿಸಲಾಗಿದೆ. ವಿವಿಧ ಅಂದಾಜಿನ ಪ್ರಕಾರ, ಸರ್ಕಾರವು 2027 ಕ್ಕೆ ಜಿಡಿಪಿಯನ್ನು ಶೇಕಡಾ 10.5 ರಿಂದ 11 ರವರೆಗೆ ಘೋಷಿಸಬಹುದು.



