ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಹಾವೇರಿ: ಕಾಂಗ್ರೆಸ್ ಪಕ್ಷ ಯಾವತ್ತೂ ಮಹಿಳಾ ಮೀಸಲಾತಿ ವಿರೋಧಿ ಅಲ್ಲ. ಈಗ ಡಿಲಿಮಿಟೇಷನ್ ಸೇರಿಸಿ ತಂದಿದ್ದಾರೆ. ಇದರಿಂದ ಉತ್ತರ ಭಾರತದ ಸಂಸದ ಸ್ಥಾನಗಳು ಹೆಚ್ಚಾಗುತ್ತವೆ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಅದಕ್ಕೆ ನಾವು ವಿರೋಧಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಣೇಬೆನ್ನೂರಿನಲ್ಲಿಂದು ಮಾತನಾಡಿದ ಅವರು, ಸಂವಿಧಾನಕ್ಕೆ 73, 74ನೇ ತಿದ್ದುಪಡಿ ಮಾಡಿದವರು ಯಾರು?. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳಲ್ಲಿ ಮೀಸಲಾತಿ ಕೊಡಬೇಕು ಅಂತಾ ಬಿಜೆಪಿಯವರು ಯಾವತ್ತಾದರೂ ಒತ್ತಾಯ ಮಾಡಿದ್ದಾರಾ?. ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ ಇರುವುದರಿಂದ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದವರು ರಾಜೀವ್ ಗಾಂಧಿ. ಮೋದಿಯವರು ರಾಜಕೀಯವಾಗಿ ಭಾಷಣ ಮಾಡುತ್ತಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧ ಮಾಡಿಲ್ಲ, ಮಾಡಲ್ಲ. 2023ರಲ್ಲಿ ಮೋದಿಯವರು ಮಹಿಳಾ ಮೀಸಲಾತಿ ಜಾರಿ ಮಾಡಬಹುದಿತ್ತಲ್ವಾ ಎಂದು ಪ್ರಶ್ನಿಸಿದರು.
ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಚಾರವಾಗಿ ಮಾತನಾಡಿ, ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತಾರೆ. ಅದರ ಬಗ್ಗೆ ನಾನು ಮಾತನಾಡಲ್ಲ ಎಂದರು.
2023ರಲ್ಲಿಯೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರವಾಗಿದೆ. ಸಾಂವಿಧಾನಿಕ ತಿದ್ದುಪಡಿ ತಂದಿದ್ದರಿಂದ ಅದು ವಿಫಲವಾಯಿತು. ಕ್ಷೇತ್ರ ಮಾರುವಿಂಗಡನೆ ಮಾಡದೆಯೇ ಮಹಿಳಾ ಮೀಸಲಾತಿ ಒಂದೇ ಮಂಡನೆಯಾಗಿದ್ದರೆ ಅಂಗೀಕಾರವಾಗುತ್ತಿತು. ರಾಜಕೀಯಕ್ಕಾಗಿ ಕ್ಷೇತ್ರ ಮರುವಿಂಗಡನೆ ಮತ್ತು ಮಹಿಳಾ ಮೀಸಲಾತಿಯನ್ನು ಒಟ್ಟಿಗೆ ತಂದಿದ್ದರಿಂದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಿದೆ. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಿದೆ ಎಂದು ಹೇಳಿದ್ದರು.
ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಕೇಂದ್ರದ ಎನ್ಡಿಎ ಸರ್ಕಾರವು ಮಹಿಳಾ ಸಬಲೀಕರಣದ ಮುಖವಾಡ ಧರಿಸಿ ದಕ್ಷಿಣ ಭಾರತದ ರಾಜಕೀಯ ಅಸ್ಮಿತೆಯನ್ನು ಅಳಿಸಲು ‘ಭೀಕರ ಸಂಚು’ ರೂಪಿಸಿದೆ. ಬಿಜೆಪಿ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲಾತಿ ಮಸೂದೆಯು ಕೇವಲ ಒಂದು ‘ಮಾಯಾಜಾಲ’ವಾಗಿದ್ದು, ಇದು ದಕ್ಷಿಣದ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳಲು ನಡೆಸುತ್ತಿರುವ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ ಎಂದು ಟೀಕಿಸಿದ್ದಾರೆ.
ಮಹಿಳೆಯರಿಗೆ ರಾಜಕೀಯ ಅಧಿಕಾರ ಸಿಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಅಚಲ ನಿಲುವು. ರಾಜೀವ್ ಗಾಂಧಿಯವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದಾಗ ವಿರೋಧಿಸಿದವರು ಈಗ ಮಹಿಳಾ ಮೀಸಲಾತಿಯ ಜಪ ಮಾಡುತ್ತಿದ್ದಾರೆ. ಆದರೆ, ಈ ಮೀಸಲಾತಿ ಜಾರಿಯಾಗಲು ‘ಕ್ಷೇತ್ರ ಮರುವಿಂಗಡಣೆ’ ಆಗಲೇಬೇಕು ಎಂಬ ಷರತ್ತು ವಿಧಿಸಿರುವುದು ತರ್ಕಹೀನವಾದುದು. ಇದು ಮಹಿಳೆಯರಿಗೆ ತಕ್ಷಣಕ್ಕೆ ನ್ಯಾಯ ಒದಗಿಸುವ ಬದಲು, ಮೀಸಲಾತಿಯನ್ನು ಮುಂದೂಡುವ ಮತ್ತು ಮರುವಿಂಗಡಣೆಯನ್ನು ಬಿಜೆಪಿಯ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಷಡ್ಯಂತ್ರ ಎಂದು ಕಿಡಿಕಾರಿದ್ದಾರೆ.



