Updated By: Priyalachhi
ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ಖಂಡನೆ ವ್ಯಕ್ತಪಡಿಸಿದ್ದ ಸಭಾನಾಯಕ ಎನ್.ಎಸ್. ಬೋಸರಾಜ್ ಅವರು ವಿಷಾದ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ನಲ್ಲಿ ಇಂದೂ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು.
ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷದ ಸದಸ್ಯರು ಸದನ ಬಾವಿಗಳಿದು ಧರಣಿ ಮುಂದುವರೆಸುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ, ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.
ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ಸಭಾನಾಯಕರು ರಾಜ್ಯಪಾಲರ ಭಾಷಣದ ಮೇಲೆ ಖಂಡನೆ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ವಂದನಾ ನಿರ್ಣಯ ಮಂಡಿಸುತ್ತಿದೆ. ಅವರ ಖಂಡನೆ ವಿಚಾರ ಸದನಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಈ ಬಗ್ಗೆ ಸರ್ಕಾರ ದ್ವಂದ್ವ ನಿಲುವು ತಳೆದಿತ್ತು. ಇದಾದ ಬಳಿಕ ವಂದನಾ ನಿರ್ಣಯ ಎಂದು ಹೇಳಿತ್ತು. ಹಾಗಾದರೆ ಖಂಡನೆ ಮಾಡಿದ್ದಕ್ಕೆ ಸಭಾನಾಯಕರು ವಿಷಾದ ವ್ಯಕ್ತಪಡಿಸಿದರೆ ಧರಣಿ ಹಿಂಪಡೆಯುತ್ತೇವೆ” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎನ್.ಎಸ್.ಭೋಸರಾಜ್, “ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ಸ್ವಾಗತಿಸಲಾಗಿದೆ” ಎಂದರು.
ಇದರಿಂದ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಧರಣಿ ಮುಂದುವರೆಸಿದಾಗ ಮಧ್ಯಪ್ರವೇಶಿಸಿದ ಹೊರಟ್ಟಿ, “ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಸ್ವಾಗತ ಎಂದು ಸರ್ಕಾರ ಹೇಳಿದೆ ಎಂದ ಮೇಲೆ ಎಲ್ಲವೂ ಸರಿ ಆಯ್ತು ಎಂದರ್ಥ” ಎಂದು ಹೇಳಿದರು.
ಆಕ್ಷೇಪ ವ್ಯಕ್ತಪಡಿಸಿದ ಛಲವಾದಿ, “ಹೇಗೆ ಆ ರೀತಿ ಅರ್ಥ ಬರುತ್ತೆ?. ಯಾವ ಡಿಕ್ಷನರಿಯಲ್ಲಿದೆ ತೋರಿಸಿ” ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯ ಅರುಣ್ ಶಂಕರಮೂರ್ತಿ ಅವರು ಹರಿಪ್ರಸಾದ್ ಅವರನ್ನು ಉದ್ದೇಶಿಸಿ ಮಾತನಾಡಿ, “ರಾಜ್ಯಪಾಲರನ್ನು ಕೈ ತೋರಿಸಿ ಮಾತನಾಡಿರುವುದು ಸರಿಯಲ್ಲ” ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, “ಕಾಲು ತೋರಿಸಕಾಗುತ್ತಾ?” ಎಂದು ಕೇಳಿದರು.



