Updated By: Priyalachhi
ಬೆಳಗಾವಿ: ಸದ್ಯ ರಾಜ್ಯದಲ್ಲಿ ನಿಖರವಾಗಿ ಕುಟುಂಬದ ಆದಾಯ ನಿರ್ಧರಿಸುವ ವ್ಯವಸ್ಥೆಯಿಲ್ಲ. ಇದರ ಲಾಭ ಪಡೆದು ಕೆಳ ಹಂತದ ಅಧಿಕಾರಿಗಳು ಆದಾಯ ಪ್ರಮಾಣ ಪತ್ರಗಳನ್ನು ಮನಬಂದಂತೆ ನೀಡುತ್ತಿದ್ದಾರೆ. ಇದರ ಫಲವಾಗಿ ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಗಳು ದುರ್ಬಳಕೆಯಾಗುತ್ತಿದೆ. ಸುಮಾರು 24.50 ಲಕ್ಷ ಅಕ್ರಮ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ಗುರುವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಗಮನ ಸೆಳೆಯುವ ಸೂಚನೆಗೆ ಅವರು ಉತ್ತರಿಸಿದರು. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಆಧಾರ್ ಜೋಡಣೆ ಸಂದರ್ಭದಲ್ಲಿ ನಿಗದಿಪಡಿಸಿದ ವಯೋಮಿತಿಗೂ ಕಡಿಮೆ ವಯಸ್ಸಿನವರು ಸೌಲಭ್ಯ ಪಡೆಯುತ್ತಿದ್ದಾರೆ. ಇದರೊಂದಿಗೆ ಸುಮಾರು 10 ಸಾವಿರಕ್ಕೂ ಅಧಿಕ ಆದಾಯ ತೆರಿಗೆ ಪಾವತಿದಾರರು, ಹೆಚ್.ಆರ್.ಎಂ.ಎಸ್ನಲ್ಲಿ ಮಾಹಿತಿ ಇರುವ ಸರ್ಕಾರಿ ನೌಕರರು ಸಹ ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಫಲಾನುಭವಿಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿಸಲ್ಲಿಸುವ ಆದಾಯ ಮಿತಿಯನ್ನು ಬಿ.ಪಿ.ಎಲ್. ಕಾರ್ಡು ಮಾದರಿಯಲ್ಲಿ 1.2 ಲಕ್ಷಕ್ಕೆ ಹೆಚ್ಚಿಸುವಂತೆ ಮನವಿಗಳು ಕೇಳಿಬಂದಿವೆ. ಸದ್ಯ ಸರ್ಕಾರದ ಗೃಹಲಕ್ಷ್ಮಿ ಸೇರಿದಂತೆ ಪಂಚ ಗ್ಯಾರಂಟಿ ಹಾಗೂ ಇತರ ಯೋಜನೆಗಳಿಂದಲೇ ಪ್ರತಿ ಕುಟುಂಬಕ್ಕೆ 32,000 ಕ್ಕಿಂತಲೂ ಹೆಚ್ಚು ಹಣ ಜಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಟುಂಬದ ಆದಾಯಮಿತಿ ನಿಖರವಾಗಿ ನಿರ್ಧರಿಸುವ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಆದಾಯ ಮಿತಿ ಹೆಚ್ಚಿಸುವುದಾಗಿ ಉತ್ತರಿಸಿದರು.
ಡೀಮ್ಡ್ ಅರಣ್ಯ ವೀಸ್ತಿರ್ಣ ಪುನರ್ಪರಿಶೀಲನೆಗೆ ಸಮಿತಿ ರಚನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ
ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಇದರ ಪುನರ್ ಪರಿಶೀಲನೆ ನಡೆಸಿ ವಾಸ್ತವದಲ್ಲಿರುವ ಪರಿಭಾವಿತ ಅರಣ್ಯ ಪ್ರದೇಶವನ್ನು ಗುರುತಿಸಲು ಸಮಿತಿ ರಚನೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು. ಅರಣ್ಯ ಇಲಾಖೆ ಜಾಗ ಗುರುತಿಸಲು ಅನುಕೂಲವಾಗುವಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಲು ಆದೇಶ ಮಾಡಲಾಗಿದೆ. ಪರಿಭಾವಿತ ಅರಣ್ಯ ಪ್ರದೇಶದ ವಿಸ್ತೀರ್ಣ ಪುನರ್ ಪರಿಶೀಲಿಸಲು ನೇಮಿಸಿರುವ ಸಮಿತಿ 6 ತಿಂಗಳಿನಲ್ಲಿ ತನ್ನ ವರದಿ ನೀಡಲಿದೆ. ಇದಕ್ಕೂ ಮುನ್ನ ಪ್ರತಿ ಜಿಲ್ಲೆಗೆ ಸಂಬಂಧಿಸಿದಂತೆ ಪರಿಭಾವಿತ ಅರಣ್ಯ ವಿಸ್ತೀರ್ಣ ಕುರಿತು ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ವರದಿ ಮಂಡಿಸಿ, ಎಲ್ಲಾ ಶಾಸಕರಿಗೂ ಮಾಹಿತಿ ನೀಡುವಂತೆ ಇಲಾಖೆಯಿಂದ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ 36992 ಹೆಕ್ಟೇರ್ ಮೀಸಲು, 545.65 ಹೆಕ್ಟೇರ್ ಗ್ರಾಮ, 2885.59 ಹೆಕ್ಟೇರ್ ರಕ್ಷಿತ, ಸೆಕ್ಷೆನ್ 04 ಅಡಿ 1047.55 ಹೆಕ್ಟೇರ್, 5529.89 ಹೆಕ್ಟೇರ್ ವರ್ಗೀಕರಿಸಿದ ಹಾಗೂ 4986.70 ಹೆಕ್ಟೇರ್ ಪರಿಭಾವಿತ ಅರಣ್ಯವಿದೆ. ಒಟ್ಟಾರೆ ಜಿಲ್ಲೆಯಲ್ಲಿ 51987 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಕಂದಾಯ, ಮೋಜಿಣಿ ಮತ್ತು ಅರಣ್ಯ ಇಲಾಖೆಗಳು ಜಂಟಿ ಮೋಜಿಣಿ ಕಾರ್ಯಕೈಗೊಂಡು ಅಕ್ರಮ ಅರಣ್ಯ ಒತ್ತುವರಿ ಪ್ರದೇಶವನ್ನು ಗುರುತಿಸಿದ್ದಾರೆ. ಕರ್ನಾಟಕ ಅರಣ್ಯ ಕಾಯಿದೆ 1964ರ ಕಲಂ 64(ಎ) ಅನ್ವಯ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ ಎಂದರು.
ಒಮ್ಮೆ ಪಹಣಿಯಲ್ಲಿ ಅರಣ್ಯ ಎಂದು ನಮೂದಾದರೆ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅನುಮತಿ ಪಡೆಯದೇ ಸಂಬಂದಿಸಿದ ಜಮೀನನ್ನು ಯಾರಿಗೂ ಮಂಜೂರು ಮಾಡಲು ಬರುವುದಿಲ್ಲ. ಸರ್ವೋಚ್ಛ ನ್ಯಾಯಾಲಯವು ಸಹ ಒಮ್ಮೆ ಅರಣ್ಯ ಎಂದರೆ ಸದಾ ಅರಣ್ಯ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಖಾಸಗಿ ಹಾಗೂ ಪಟ್ಟಾ ಜಮೀನು ಹೊಂದಿರವ ಯಾರನ್ನು ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸಿ ತೊಂದರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಂಗಾರಪೇಟೆ ತಾಲೂಕಿನ ಇಂದಿರಾಗಾಂಧಿ ಪಾರ್ಕ್ ಅಭಿವೃದ್ಧಿ ಪಡಿಸಲು 2016-17 ರಿಂದ 2025-26 ರವರೆಗೆ ರೂ.2.37 ಕೋಟಿ ಅನುದಾನ ನೀಡಲಾಗಿದೆ. ಅಗತ್ಯವಿದ್ದಲ್ಲಿ ಶಾಸಕರ ಬೇಡಿಕೆ ಮೇರೆಗೆ ಅನುದಾನ ಒದಗಿಸಲಾಗುವುದು. ಮಾಲೂರು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ತಡೆಗಟ್ಟಲು 74.43 ಕಿ.ಮೀ. ಸೋಲಾರ್ ತಂತಿಬೇಲಿ ಅಳವಡಿಸಲಾಗಿದೆ. ತಂತಿಬೇಲಿ ನಿರ್ವಹಣೆ ಅಗತ್ಯ ಇರುವ ಅನುದಾನವನ್ನು ಸಹ ನೀಡುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.



