ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುತ್ತಾರೆ ಎಂಬ ಭರವಸೆ ಇದೆ: ಸತೀಶ್ ಜಾರಕಿಹೊಳಿ

0
21

Updated By: Priyalachhi 

ಯಾದಗಿರಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಮಾಹಿತಿ ಇಲ್ಲ. ಸಂಕ್ರಾಂತಿ ಹಬ್ಬ ಮುಗಿದ ನಂತರ ಇದರ ಬಗ್ಗೆ ಮಾತನಾಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರೇ ಈ ಬಾರಿ ಬಜೆಟ್ ಮಂಡಿಸಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಹೀಗಿದ್ದಾಗ ಅವರೇ ಬಜೆಟ್ ಮಂಡಿಸುತ್ತಾರೆ ಎಂಬ ಭರವಸೆ ಇದೆ ಎಂದರು.

ರಾಹುಲ್ ಗಾಂಧಿ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿ ಬಂದ ನಂತರ ಡಿಕೆಶಿ ಬೆಂಬಲಿಗರು ದೆಹಲಿಗೆ ತೆರಳುವ ಮಾಹಿತಿ ಇದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೋಡೋಣ, ಅಂತಹ ಸಂದರ್ಭ ಪಕ್ಷಕ್ಕೆ ಬರುವುದಿಲ್ಲ. ಪಕ್ಷದ ಹೈಕಮಾಂಡ್ ಇದೆ. ನಾವು ಯಾರೂ ಕೂಡಾ ದೆಹಲಿಗೆ ಹೋಗಲ್ಲ. ಈ ವಿಚಾರವನ್ನು ಸಂಪೂರ್ಣವಾಗಿ ಹೈಕಮಾಂಡ್‌ಗೆ ಬಿಟ್ಟಿದ್ದೇವೆ ಎಂದು ಹೇಳಿದರು.

ನೀವು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಯತ್ನಿಸುವಿರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸ್ಥಾನ ದಾರಿಯಲ್ಲಿ ಸಿಗುವಂತಹದ್ದಲ್ಲ. ಅದಕ್ಕೆ ತನ್ನದೇ ಆದ ದಾರಿ ಇದೆ. ನೋಡೋಣ ಎಂದರು.

ಕೋಗಿಲು ಬಡಾವಣೆಯ ಮನೆಗಳ ತೆರವು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಜಾಗ ಯಾರದ್ದೆಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಈ ವಿಚಾರದ ಕುರಿತು ಚರ್ಚೆ ನಡೆಸಲು ಮಹಾನಗರ ಪಾಲಿಕೆ ಇದೆ. ಚರ್ಚೆಯ ಮೂಲಕ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ಮಾನವೀಯತೆ ದೃಷ್ಟಿಯಿಂದ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಎಂದು ತಿಳಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here