Updated By: Priyalachhi
ಕಡಬ/ದ.ಕ: ಚಾಲನಾ ಪರವಾನಗಿ (Driving Licence) ಎನ್ನುವುದು ಕೇವಲ ವಾಹನ ಚಾಲನೆಗೆ ಮಾತ್ರವಲ್ಲ, ನಾಗರಿಕರ ಗುರುತಿನ ಪ್ರಮುಖ ದಾಖಲೆಗಳಲ್ಲೊಂದು. ಆದರೆ ಇಂತಹ ಮಹತ್ವದ ದಾಖಲೆಗಳಲ್ಲಿ ಸಂಭವಿಸಿರುವ ಪೋಷಕರ ಹೆಸರು ತಿದ್ದುಪಡಿ ಮತ್ತು ಜನನ ದಿನಾಂಕದ ತಪ್ಪುಗಳನ್ನು ತಿದ್ದುಪಡಿ ಮಾಡಲು ಅವಕಾಶವೇ ಇಲ್ಲ ಎನ್ನುವ ಕಠಿಣ ನಿಯಮ ಸಾರ್ವಜನಿಕರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.
ರಾಜ್ಯಾದ್ಯಂತ ಅನೇಕರು, ತಮ್ಮ ಚಾಲನಾ ಪರವಾನಗಿಯಲ್ಲಿ ಪೊಷಕರ ಹೆಸರಿನ ಅಕ್ಷರದ ತಪ್ಪುಗಳು, ಜನನ ವರ್ಷ ಅಥವಾ ದಿನಾಂಕದ ಲಘು ವ್ಯತ್ಯಾಸ ಕಂಡುಬಂದರೂ, ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗದೇ ಆರ್‌ಟಿಒ ಕಚೇರಿಗಳ ಮೆಟ್ಟಿಲು ಹತ್ತಿ ಹತ್ತಿ ಬೇಸತ್ತಿದ್ದಾರೆ.
ಕಾನೂನು ಏನು ಹೇಳುತ್ತದೆ?: ಮೋಟಾರ್ ವಾಹನ ಕಾಯ್ದೆ ಹಾಗೂ ಸಾರಿಗೆ ಇಲಾಖೆಯ ಪ್ರಚಲಿತ ಮಾರ್ಗಸೂಚಿಗಳ ಪ್ರಕಾರ, ಒಮ್ಮೆ ದಾಖಲಾಗಿರುವ ಜನನ ದಿನಾಂಕವನ್ನು ಮತ್ತು ಪೊಷಕರ ಹೆಸರು ತಿದ್ದುಪಡಿ ಮಾಡಲು ಅವಕಾಶ ಇಲ್ಲ. ಅರ್ಜಿದಾರರು ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಅಥವಾ ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಸಲ್ಲಿಸಿದರೂ ಸಹ, ನಿಯಮ ಅವಕಾಶ ನೀಡುವುದಿಲ್ಲ ಎನ್ನುವ ಒಂದೇ ಉತ್ತರ ದೊರೆಯುತ್ತಿದೆ.
ಸಾಮಾನ್ಯ ಜನರ ಸಂಕಷ್ಟಗಳು:
- ಉದ್ಯೋಗ ಅರ್ಜಿ ಸಲ್ಲಿಸುವಾಗ ದಾಖಲೆಗಳ ನಡುವೆ ವ್ಯತ್ಯಾಸ ಬ್ಯಾಂಕ್, ವಿಮಾ ಹಾಗೂ ಪಿಂಚಣಿ ಪ್ರಕ್ರಿಯೆಗಳಲ್ಲಿ ಅಡಚಣೆ
- ಪಾಸ್‌ಪೋರ್ಟ್, ಸರ್ಕಾರಿ ಯೋಜನೆಗಳಲ್ಲಿ ಸಮಸ್ಯೆ, ವಯೋಮಿತಿ ಆಧಾರಿತ ಸೌಲಭ್ಯ ಕಳೆದುಕೊಳ್ಳುವ ಆತಂಕ
- ಇದೆಲ್ಲದರ ಪರಿಣಾಮವಾಗಿ, ಸಾಮಾನ್ಯ ನಾಗರಿಕರು ತಪ್ಪು ತಮ್ಮದಲ್ಲದಿದ್ದರೂ ಅದರ ಬೆಲೆ ಕಟ್ಟುವಂತಾಗಿದೆ.
ಜನರ ಆಕ್ರೋಶ: ಆಧುನಿಕ ಯುಗದಲ್ಲಿ ಆಧಾರ್, ಪಾಸ್‌ಪೋರ್ಟ್‌ನಲ್ಲಿ ತಿದ್ದುಪಡಿ ಸಾಧ್ಯವಾಗುವಾಗ, ಚಾಲನಾ ಪರವಾನಗಿಯಲ್ಲಿ ಯಾಕೆ ಇಲ್ಲ? ಎಂಬ ಪ್ರಶ್ನೆ ಜನರಿಂದ ಕೇಳಿಬರುತ್ತಿದೆ. ತಂತ್ರಜ್ಞಾನ ಯುಗದಲ್ಲಿ ಇಂತಹ ನಿಯಮಗಳು ಜನವಿರೋಧಿ ಎನ್ನುವ ಅಭಿಪ್ರಾಯವೂ ಒಂದು ಕಡೆ ವ್ಯಕ್ತವಾಗುತ್ತಿದೆ.
ಪರಿಹಾರ ಏನು?: ವಿಶೇಷ ಕಾನೂನು ತಜ್ಞರ ಅಭಿಪ್ರಾಯದಂತೆ, ದಾಖಲೆಗಳ ನಿಖರ ಪರಿಶೀಲನೆಯೊಂದಿಗೆ, ನಿಗದಿತ ಅವಧಿ ಹಾಗೂ ಶುಲ್ಕದ ಮೂಲಕ, ವಿಶೇಷ ಸಮಿತಿಯ ಅನುಮೋದನೆಯೊಂದಿಗೆ ಜನನ ದಿನಾಂಕ ಮತ್ತು ಪೋಷಕರ ಹೆಸರು ತಿದ್ದುಪಡಿ ಮಾಡಲು ಅವಕಾಶ ನೀಡಿದರೆ, ನಕಲಿ ತಿದ್ದುಪಡಿ ತಡೆದು ನಿಜವಾದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎನ್ನುವುದು ಜನರ ವಾದ.
ಸಾರ್ವಜನಿಕರ ನಿರೀಕ್ಷೆ: ಹಲವು ವರ್ಷಗಳ ಹಿಂದೆ ಶಾಲಾ ದಾಖಲಾತಿ ಸಮಯದಲ್ಲಿ ಪೋಷಕರ ಎಡವಟ್ಟಿನಿಂದಾಗಿ ತತ್ಸಮಾನ(ಎಸ್ಎಸ್ಎಲ್‌ಸಿ) ಸರ್ಟಿಫಿಕೇಟ್‌ನಲ್ಲಿ ಆದ ತೊಂದರೆಗಳನ್ನು ಸಾರಿಗೆ ಇಲಾಖೆ ಹಾಗೂ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಜನಪರ ಹಾಗೂ ಸೂಕ್ತ ತಿದ್ದುಪಡಿ ನೀತಿ ಜಾರಿಗೆ ತರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.



