ಬಿಡಿಎ ಅಂದ್ರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ, ಕಾನೂನು ಚೌಕಟ್ಟಲ್ಲಿ ಕೆಲಸ ಮಾಡಿ: ಡಿಕೆಶಿ

0
73

Updated By: Priyalachhi 

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಐವತ್ತು ವರ್ಷ ತುಂಬಿದ್ದು, ಈ ವರ್ಷದಿಂದಾದರೂ ಘನತೆ ಬದಲಾಯಿಸಿ. ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಸುಧಾರಣೆಗಳು, ಸಾರ್ವಜನಿಕ ಅಹವಾಲು ನಿರ್ವಹಣೆ ಕುರಿತು ಬಿಡಿಎ ನೌಕರರಿಗೆ ತರಬೇತಿ ಕಾರ್ಯಾಗಾರವನ್ನು ಡಿಕೆಶಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

“ನಮಗೆ ಏನು ತರಬೇತಿ ನೀಡಿದ್ದಾರೆ ಎಂದು ನಿಮಗೆ ಅಚ್ಚರಿಯಾಗಬಹುದು. ನಾವು ಎಷ್ಟೇ ಬುದ್ಧಿವಂತರಾದರೂ ಜ್ಞಾನ, ಅನುಭವದ ಮೂಲಕ ಸಾಯುವವರೆಗೂ ಕಲಿಯುವ ಅಗತ್ಯವಿರುತ್ತದೆ. ಹೊಸ ತಲೆಮಾರು, ಹೊಸ ವ್ಯವಸ್ಥೆ ಬರುತ್ತದೆ. ನಾವು ಅಂಕಿಗಳನ್ನು ಗುಣಿತ ಮಾಡುತ್ತಿದ್ದೆವು, ನಂತರ ಕ್ಯಾಲ್ಕುಲೇಟರ್ ಬಂತು. ನಂತರ ಕಂಪ್ಯೂಟರ್, ಈಗ ಕೃತಕ ಬುದ್ಧಿಮತ್ತೆಯ ಕಾಲ ಬಂದಿದೆ. ಈಗ ಭೂ ಮಾಪನವನ್ನು ಟೇಪ್ ಹಿಡಿದು ಮಾಡುವ ಅಗತ್ಯವಿಲ್ಲ, ಡ್ರೋನ್ ಮೂಲಕವೇ ಅಳತೆ ಮಾಡಬಹುದಾಗಿದೆ” ಎಂದು ತಿಳಿಸಿದರು.

“ನಾನು ನನ್ನದೇ ಆದ ರೀತಿಯ ಇಂಟಿಲಿಜೆನ್ಸ್ ಮೂಲಕ ನಿಮ್ಮಲ್ಲಿ ನಡೆಯುತ್ತಿರುವ ಸಂತೆ, ದಂಧೆ, ಏಜೆಂಟ್‌ಗಳ ಪಟ್ಟಿ ಪಡೆಯಲು ಆರು ತಿಂಗಳು ಬೇಕಾಯಿತು. ಪ್ರತಿ ಹಂತದಲ್ಲಿ ಎಷ್ಟು ಕೊಳಕಿದೆ, ಎಷ್ಟು ಒಳ್ಳೆಯದಿದೆ ಎಂಬುದನ್ನು ಅರಿತಿದ್ದೇನೆ. ಹೀಗಾಗಿ ಎಲ್ಲ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಲು ತೀರ್ಮಾನಿಸಿದ್ದೇನೆ. ಕೆಲವರಿಗೆ ಇದರಿಂದ ಸಮಾಧಾನವಾಗದಿರಬಹುದು. ನಿಮ್ಮಲ್ಲಿ ಈ ರೀತಿ ಕೇವಲ 10% ಮಾತ್ರ ಇರಬಹುದು. ಅವರಿಂದ ಇಡೀ ಬಿಡಿಎಗೆ ಕೆಟ್ಟ ಹೆಸರು ಬರುತ್ತಿದೆ. ನಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆಯಾದರೂ ನಾವು ಬಿಡಿಎ ಘನತೆಯನ್ನು ಬದಲಿಸಿಕೊಂಡು ಹೋಗಬೇಕು. ಈ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ತರಬೇತಿ ನೀಡುತ್ತಿದ್ದೇವೆ” ಎಂದು ತಿಳಿಸಿದರು.

“ಬಿಡಿಎ ಹಾಗೂ ಜಿಬಿಎ ಬೆಂಗಳೂರಿನ ಮುಖವಾಣಿ. ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಬೆಂಗಳೂರಿಗೆ ನಿಮ್ಮ ಶಿಸ್ತು ಹಾಗೂ ಪ್ರಾಮಾಣಿಕತೆಯ ಅಗತ್ಯವಿದೆ. ಇವು ಇಲ್ಲವಾದರೆ ಯಾರು ಏನೂ ಮಾಡಲು ಸಾಧ್ಯವಿಲ್ಲ. ನೀವು ಪ್ರತಿ ಫೈಲ್‌ಗಳನ್ನು ಕೊಕ್ಕೆ ಹಾಕಿ ಓಡಾಡಿಸುವ ಬದಲು ಸಕಾರಾತ್ಮಕ ಮನೋಭಾವದಲ್ಲಿ ಪರಿಹಾರ ಹುಡುಕಿ. ತಪ್ಪು ಮಾಡಿ ನನ್ನ ಕಣ್ಣಿಗೆ ಬೀಳಬೇಡಿ. ಬಿದ್ದರೆ ಬಡಿದು ಬಿಸಾಕುತ್ತೇನೆ. ಕೇಸು ದಾಖಲಿಸಿದ ಬಳಿಕ, ಯಾರಿಂದ ಶಿಫಾರಸು ತಂದರೂ ನಾನು ಬಗ್ಗುವುದಿಲ್ಲ. ಬೆಂಗಳೂರು ಕಟ್ಟುವಲ್ಲಿ ನಿಮ್ಮ ಕೊಡುಗೆಯೂ ಇರಲಿ. ಬಿಡಿಎ ಹಾಗೂ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದೇ ತಿಂಗಳು 17ಕ್ಕೆ ಬಿಡಿಎ ರಚನೆಯಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಈ ಸಂಭ್ರಮಾಚರಣೆ ವೇಳೆ ಹೆಗ್ಗುರುತು ಬಿಟ್ಟು ಹೋಗಲು ನನ್ನ ಹಾಗೂ ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಅವರ ತಂಡದ ಅಭಿಲಾಶೆಯಾಗಿದೆ. ಇದಕ್ಕೆ ಬಿಡಿಎನಲ್ಲಿ ಪಾರದರ್ಶಕತೆ ತರಬೇಕು. ನೊಂದ ಜನರು ಬಿಡಿಎ ಬಳಿ ಬರುತ್ತಾರೆ. ಜನ ನಿಮ್ಮ ಬಳಿಗೆ ಬಹಳ ಗೌರವಯುತವಾಗಿ ಬರುವಂತಾಗಬೇಕು” ಎಂದು ಮಾರ್ಗದರ್ಶನ ನೀಡಿದರು.

sambrama prabha editor suresh kt

LEAVE A REPLY

Please enter your comment!
Please enter your name here