ಮದ್ರಾಸ್​ ಹೈಕೋರ್ಟ್​ ಜಡ್ಜ್​ ಪದಚ್ಯುತಿ ಕೋರಿ ಸ್ಪೀಕರ್​ಗೆ I.N.D.I.A ಕೂಟ ನೋಟಿಸ್​

0
70

Updated By: Priyalachhi

ನವದೆಹಲಿ: ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದಲ್ಲಿನ ಸುಬ್ರಹ್ಮಣ್ಯ ಸ್ವಾಮಿ ದೀಪೋತ್ಸವಕ್ಕೆ ಅವಕಾಶ ನೀಡಿ ಆದೇಶಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ಅವರನ್ನು ಪದಚ್ಯುತಿಗೊಳಿಸಲು (ಮಹಾಭಿಯೋಗ) ಕೋರಿ ಡಿಎಂಕೆ ನೇತೃತ್ವದ ಇಂಡಿಯಾ ಕೂಟದ ನಿಯೋಗ ಇಂದು (ಮಂಗಳವಾರ) ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದೆ.

ಡಿಎಂಕೆ ನಾಯಕಿ ಕನಿಮೋಳಿ ಮತ್ತು ಟಿ.ಆರ್. ಬಾಲು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್​​ನಿಂದ ಪ್ರಿಯಾಂಕಾ ವಾದ್ರಾ ಸೇರಿದಂತೆ ಹಲವು ನಾಯಕರು ಸ್ಪೀಕರ್ ಬಿರ್ಲಾ ಅವರಿಗೆ ವಾಗ್ದಂಡನೆ ನೋಟಿಸ್ ಹಸ್ತಾಂತರಿಸಿದರು. ಅದರಲ್ಲಿ 107 ಸಂಸದರು ಸಹಿ ಮಾಡಿದ್ದು, “ನ್ಯಾಯಾಧೀಶರ ನಡೆಯು ನಿಷ್ಪಕ್ಷಪಾತ, ಪಾರದರ್ಶಕತೆ ಮತ್ತು ನ್ಯಾಯಾಂಗದ ಜಾತ್ಯತೀತ ತತ್ವದ ಮೇಲೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ” ಎಂದು ಹೇಳಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶ ಸ್ವಾಮಿನಾಥನ್​ ಅವರು, ಪ್ರಕರಣ ನಿರ್ಧರಿಸುವಾಗ ನಿರ್ದಿಷ್ಟ ಸಮುದಾಯದ ಪರ ರಾಜಕೀಯ ಪ್ರೇರಿತ ನಿಲುವು ತಳೆದಿದ್ದಾರೆ. ಇದು ದೇಶದ ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ನೋಟಿಸ್​​ನಲ್ಲಿ ಆರೋಪಿಸಲಾಗಿದೆ.

ವಿಪಕ್ಷಗಳ ವಿರುದ್ಧ ಬಿಜೆಪಿ ಟೀಕೆ: ಜಡ್ಜ್​ ವಿರುದ್ಧ ಮಹಾಭಿಯೋಗ ಮಂಡಿಸಲು ಕೋರಿರುವ ವಿಪಕ್ಷಗಳನ್ನು ಬಿಜೆಪಿ ಟೀಕಿಸಿದೆ. ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ನ್ಯಾಯಾಧೀಶ ಸ್ವಾಮಿನಾಥನ್ ಅವರ ವಿರುದ್ಧದ ನೋಟಿಸ್ ‘ಅಲ್ಪಸಂಖ್ಯಾತರ ಓಲೈಕೆ’ ಎಂದು ದೂರಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅವರು,” ಇಂಡಿಯಾ ಕೂಟ ತನ್ನ ಹಿಂದೂ ವಿರೋಧಿ ನೀತಿಯನ್ನು ಮತ್ತೆ ರುಜುವಾತು ಮಾಡಿದೆ. ಅದನ್ನು ಅವರು ಗೌರವದ ಬ್ಯಾಡ್ಜ್‌ನಂತೆ ಧರಿಸುತ್ತಾರೆ. ಸಾಂವಿಧಾನಿಕ ಹಕ್ಕುಗಳ ಬಗ್ಗೆ ಜೋರಾಗಿ ಮಾತನಾಡುವುದು ಈ ಕೂಟಕ್ಕೆ ವಾಚಾಳಿತನವಾಗಿದೆ. ತಮಿಳುನಾಡು ಸರ್ಕಾರ ಈ ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದರ ಹೊರತಾಗಿಯೂ ನ್ಯಾಯಾಧೀಶರ ವಿರುದ್ಧ ಮಹಾಭಿಯೋಗಕ್ಕೆ ಮುಂದಾಗಿರುವುದು ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯವನ್ನು ಪೋಷಿಸುವ ಹತಾಶ ಪ್ರಯತ್ನ” ಎಂದು ತೆಗಳಿದ್ದಾರೆ.

ನ್ಯಾಯಾಧೀಶರ ಆದೇಶ ಏನಾಗಿತ್ತು? ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ಎರಡು ಪುರಾತನ ದೀಪ ಸ್ತಂಭಗಳಿದ್ದು, ಈ ಪೈಕಿ ಒಂದರಲ್ಲಿ ದೀಪೋತ್ಸವ ನಡೆಯುತ್ತದೆ. ಒಂದು ಸ್ತಂಭವು ಬೆಟ್ಟ ಕೆಳಗಿದ್ದರೆ, ಇನ್ನೊಂದು ಮಧ್ಯಭಾಗದಲ್ಲಿದೆ. ಈವರೆಗೂ ಕೆಳಗಿನ ಸ್ತಂಭದಲ್ಲಿ ಮಾತ್ರ ದೀಪೋತ್ಸವ ನಡೆಯುತ್ತಿತ್ತು. ಆದರೆ ಹಿಂದು ಧರ್ಮದ ಮೇಲೆ ನಂಬಿಕೆವುಳ್ಳವರು ಮತ್ತೊಂದು ಸ್ತಂಭದ ಮೇಲೂ ದೀಪ ಬೆಳಗಿಸಲು ಅವಕಾಶ ಕೋರಿದ್ದರು.

ಇದನ್ನು ಸರ್ಕಾರ ನಿರಾಕರಿಸಿತ್ತು. ಸ್ತಂಭದ ಬಳಿ ದರ್ಗಾ ಇದ್ದು, ಕೋಮು ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಕಾರಣ ನೀಡಿತ್ತು. ಈ ಕುರಿತು ಮದ್ರಾಸ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ಅವರು, ಎರಡನೇ ಸ್ತಂಭದಲ್ಲೂ ದೀಪ ಬೆಳಗಿಸಲು ಅವಕಾಶವಿದೆ ಎಂದು ಆದೇಶ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

sambrama prabha editor suresh kt

LEAVE A REPLY

Please enter your comment!
Please enter your name here