ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಮೈಸೂರು: ಮೈಸೂರು ರೈಲ್ವೆ ವಿಭಾಗವು ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 449.13 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಅತೀ ಹೆಚ್ಚಿನ ಪ್ರಯಾಣಿಕ ಆದಾಯವನ್ನು ಗಳಿಸಿದ್ದು, ಹಿಂದಿನ 419.89 ಕೋಟಿ ರೂ. ದಾಖಲೆಯನ್ನು ಮೀರಿಸಿದೆ.
ಟಿಕೆಟ್ ಪರಿಶೀಲನೆ ಮೂಲಕ 9.75 ಕೋಟಿ ರೂ. ಆದಾಯವನ್ನು ಗಳಿಸಿದ್ದು, ಇದು ಹಿಂದಿನ ದಾಖಲೆ ಮತ್ತು ವಾರ್ಷಿಕ ಗುರಿಯನ್ನೂ ಮೀರಿದೆ. ಈ ಮೂಲಕ ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ದಾಖಲೆಯ ಆದಾಯ ಮತ್ತು ವಾಣಿಜ್ಯ ವಹಿವಾಟು ವೃದ್ಧಿಯಾಗಿದೆ. 2025–26 ಹಣಕಾಸು ವರ್ಷದಲ್ಲಿ ಮೈಸೂರು ವಿಭಾಗವು ಅತ್ಯುತ್ತಮ ಸಾಧನೆಯನ್ನು ದಾಖಲಿಸಿದ್ದು, ಪ್ರಯಾಣಿಕ, ಸರಕು ಹಾಗೂ ನಾನ್-ಫೇರ್ ಆದಾಯ ವಿಭಾಗಗಳಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ.
ನಾನ್-ಫೇರ್ ಆದಾಯ ಕ್ಷೇತ್ರದಲ್ಲಿಯೂ ಗಣನೀಯ ಬೆಳವಣಿಗೆ ಕಂಡುಬಂದಿದ್ದು, ವಾಣಿಜ್ಯ ಜಾಹೀರಾತು (3.17 ಕೋಟಿ ರೂ.), ಪಾರ್ಕಿಂಗ್ (4.02 ಕೋಟಿ ರೂ.) ಮತ್ತು ಆಹಾರ ಪೂರೈಕೆ (2.61 ಕೋಟಿ ರೂ.) ವಿಭಾಗಗಳಲ್ಲಿ ದಾಖಲೆಯ ಆದಾಯ ಬಂದಿದೆ.
ಸರಕು ಸಾಗಣೆ ವಿಭಾಗದಲ್ಲಿ 900.19 ಕೋಟಿ ರೂ. ಆದಾಯವನ್ನು ದಾಖಲಿಸಿದ್ದು, ಇದು ಎರಡನೇ ಅತಿ ಹೆಚ್ಚು ಸಾಧನೆಯಾಗಿದೆ. 116 ರೈಲು ರೇಕುಗಳ ಮೂಲಕ ವಾಹನ ಸಾಗಣೆ ಮಾಡಲಾಗಿದ್ದು, 23.94 ಕೋಟಿ ರೂ. ಆದಾಯ ಬಂದಿದೆ. ಇದಲ್ಲದೆ, 8.665 ಮಿಲಿಯನ್ ಟನ್ ಐರನ್ ಓರ್(ಕಬ್ಬಿಣ ಅದಿರು) ಲೋಡಿಂಗ್ ಮೂಲಕ ಎರಡನೇ ಅತಿ ಹೆಚ್ಚು ಸಾಧನೆ ಮಾಡಲಾಗಿದೆ.
ಪಾರ್ಸೆಲ್ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, ಒಟ್ಟು 11.81 ಕೋಟಿ ರೂ. ಆದಾಯ ಗಳಿಸಲಾಗಿದೆ. SLR (ಸೀಟಿಂಗ್ ಕಮ್ ಲಗೇಜ್ ರೇಕ್) ಮತ್ತು VPH (ಹೈ ಕೆಪ್ಯಾಸಿಟಿ ಪಾರ್ಸೆಲ್ ವ್ಯಾನ್) ಲೀಸಿಂಗ್ ಮೂಲಕ 5.85 ಕೋಟಿ ರೂ. ಅತಿ ಹೆಚ್ಚು ಆದಾಯ ಗಳಿಸಲಾಗಿದೆ.



