Updated By: Priyalachhi
ಮೈಸೂರು: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯಲಿರುವ ಶ್ರೀ ಶಿವರಾತ್ರಿ ಶಿವರಾತ್ರೀಶ್ವರ ಸ್ವಾಮೀಜಿಯ 1066ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮಂಗಳವಾರ ಸ್ವಾಗತಿಸಲಾಯಿತು.
ರಾಜ್ಯಕ್ಕೆ ಬಂದ ರಾಷ್ಟ್ರಪತಿಗಳನ್ನು ಸ್ವಾಗತಿಸಿದ ರಾಜ್ಯಪಾಲರು; ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ಅವರು ಹೂ ಗುಚ್ಛ ನೀಡುವ ಮೂಲಕ ರಾಷ್ಟ್ರಪತಿಗಳನ್ನು ಸ್ವಾಗತಿಸಿದರು. ಈ ವೇಳೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮತ್ತಿತರರು ಇದ್ದರು.
ಮೈಸೂರಿನಲ್ಲಿ ರಾಷ್ಟ್ರಪತಿ ಇಂದು ವಾಸ್ತವ್ಯ : ಮಳವಳ್ಳಿಯಲ್ಲಿ ಕಾರ್ಯಕ್ರಮ ಮುಗಿಸಿದ ಬಳಿಕ ಸಂಜೆ 5.20ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ, ಎಂಜಿ ರಸ್ತೆಯಲ್ಲಿರುವ ಪ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿ. 17ರಂದು ಬೆಳಗ್ಗೆ 9.30ಕ್ಕೆ ಅಲ್ಲಿಯೇ ಉಪಹಾರ ಮುಗಿಸಿಕೊಂಡು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದ ಮೂಲಕ ಆಂಧ್ರಪ್ರದೇಶದ ತಿರುಪತಿಗೆ ಪ್ರಯಾಣಿಸಲಿದ್ದಾರೆ.
ರಾಷ್ಟ್ರಪತಿ ಆಗಮನದ ಹಿನ್ನೆಲೆ ಹೆಚ್ಚಿನ ಬಿಗಿ ಭದ್ರತೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೋಟೆಲ್‌ನಲ್ಲಿ ಇಂದು ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹೋಟೆಲ್‌ನ ಸುತ್ತಮುತ್ತ ಸಂಚಾರಕ್ಕೆ ನಿರ್ಬಂಧ ವಿಧಿಸುವುದರೊಂದಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ: ಮಂಡಕಳ್ಳಿ ವಿಮಾನ ನಿಲ್ದಾಣದಿಂದ ರಾಷ್ಟ್ರಪತಿ ಅವರು ನಂಜನಗೂಡು ರಸ್ತೆ ಮಾರ್ಗವಾಗಿ ಹೋಟೆಲ್ಗೆ ಆಗಮಿಸುವುದರಿಂದ ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ರಾಷ್ಟ್ರಪತಿಗಳ ರಾತ್ರಿ ಆಗಮನದ ವೇಳೆ ಮತ್ತು ಬೆಳಗ್ಗೆ ಹೊರಡುವ ವೇಳೆ ನಂಜನಗೂಡು ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಾಹನ ಸವಾರರು ಈ ಬಗ್ಗೆ ಗಮನಿಸಿ ತಮ್ಮ ಸಂಚಾರದ ಮಾರ್ಗಗಳನ್ನು ಬದಲಿಸಿಕೊಳ್ಳುವುದು ಅಗತ್ಯವಾಗಿದೆ. ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸಚಿವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.



