Updated By: Priyalachhi
ಹುಬ್ಬಳ್ಳಿ: ರಾಜ್ಯ ಸರ್ಕಾರ ರೈತರ ದಾರಿ ತಪ್ಪಿಸೋ ಕೆಲಸ ಮಾಡುತ್ತಿದೆ. ಅನುಭವ ಇರೋ ವ್ಯಕ್ತಿ ವಿಚಾರ ಮಾಡಿ ಮಾತನಾಡಬೇಕು. ಆದ್ರೆ ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತನಾಡಿದ್ದಾರೆ. ಮೆಕ್ಕೆಜೋಳ 70 ಲಕ್ಷ ಟನ್ ಆಮದು ಮಾಡಿಕೊಂಡಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಸುಳ್ಳು ಹೇಳಲಿಕ್ಕಾದ್ರು ಏನಾದ್ರು ಬೇಕು. ನಾವು ಈ ವರ್ಷ ₹900 ಕೋಟಿ ಮೌಲ್ಯದ ಮೆಕ್ಕೆಜೋಳ ರಪ್ತು ಮಾಡಿದ್ದೇವೆ. ನಾಪೆಡ್ನವರು ಖರೀದಿ ಮಾಡಲು ತಯಾರಿದ್ದಾರೆ. ಅದಕ್ಕೆ ಇಂಡೆಂಟ್ ರಾಜ್ಯ ಸರ್ಕಾರ ಕೊಡಬೇಕು, ಕೊಟ್ಟಿಲ್ಲ. ಖಾನೇ ಕೆ ಲಿಯೇ ಮೈ ಲಡನೇ ಕೆ ಲಿಯೇ ಬಡಾ ಬಾಯಿ ಅನ್ನೋದು ಸಿದ್ದರಾಮಯ್ಯ ಸಿದ್ಧಾಂತವಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದೆ: ರಾಜ್ಯ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಗೃಹಲಕ್ಷ್ಮಿ ಹಣ ಆಗಸ್ಟ್ನಿಂದ ಬಾಕಿಯಿದೆ. ರಾಜ್ಯ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಂಗಳೂರಲ್ಲಿ ಹಾಡಹಗಲೇ ರಾಬರಿ ಆಗ್ತಿವೆ. ಸರ್ಕಾರಕ್ಕೆ ಆಡಳಿತದ ಮೇಲೆ ಗಮನ ಕಡಿಮೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಶಾಸಕರು ಚೀಟಿ ಕೊಟ್ಟು ಟ್ರಾನ್ಸ್ಫರ್ ಮಾಡಿಸ್ತಿದ್ದಾರೆ ಎಂದು ಆರೋಪಿಸಿದರು.
ಪ್ರಚಂಡ ಬಹುಮತ ಕೊಟ್ಟ ಜನರಿಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ. ಶಾಸಕರ ಖರೀದಿಗೆ ಪರಸ್ಪರ ನಾಯಕರು ಇಳಿದಿದ್ದಾರೆ. ಜೈಲಿಗೆ ಹೋಗಿ ಶಾಸಕರನ್ನು ಭೇಟಿಯಾಗ್ತಿದ್ದಾರೆ. ವೋಟಿಂಗ್ ಬಂದ್ರೆ ಬೆಂಬಲ ಇರಲಿ ಅಂತ ಭೇಟಿ ಮಾಡ್ತಿದ್ದಾರೆ. ವೋಟಿಂಗ್ನಲ್ಲಿ ತಮ್ಮ ತಮ್ಮ ನಂಬರ್ ಜೋಡಿಸಲು ಪ್ರಯತ್ನ ಮಾಡ್ತಿದ್ದಾರೆ ಎಂದರು.
ನಾವು ಸರ್ಕಾರ ಬೀಳಬೇಕು ಅಂತ ಬಯಸಲ್ಲ: ನಾನು ಸಿಎಂ ಆಗಿ ಮುಂದುವರೆಯುತ್ತೇನೆ ಅಂತ ಸಿದ್ದರಾಮಯ್ಯ ದೆಹಲಿಗೆ ಹೋಗ್ತಿದ್ದಾರೆ. ಅವರನ್ನು ತೆಗೆಯಿರಿ ಅಂತ ಡಿ.ಕೆ ಶಿವಕುಮಾರ್ ಹೋಗ್ತಿದ್ದಾರೆ. ನಿಮಗೆ ಆಡಳಿತ ನಡೆಸಲು ಆಗದೇ ಇದ್ದರೆ ಬಿಟ್ಟು ಹೋಗಿ. ಸರ್ಕಾರ ಬೇಗನೆ ಬಿದ್ದು ಹೋಗಲಿ ಅನ್ನೋದು ನಮ್ಮ ಉದ್ದೇಶವಲ್ಲ. ರಾಜ್ಯದಲ್ಲಿ ಇದೀಗ ಶಾಸಕರ ಖರೀದಿ ಜೋರಾಗಿದೆ. ರಾಜ್ಯದಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ ಹುಟ್ಟಲ್ಲ. ನಾವು ಯಾವುದೇ ಕಾರಣಕ್ಕೂ ಈ ಸರ್ಕಾರ ಬೀಳಬೇಕು ಅಂತ ಬಯಸಲ್ಲ. ಜನ ಅವರಿಗೆ ಬಹುಮತ ನೀಡಿದ್ದಾರೆ, ಅವರು ಐದು ವರ್ಷ ಅಧಿಕಾರ ನಡೆಸಲಿ ಎಂದು ಜೋಶಿ ಹೇಳಿದರು.



