ಸಾರಿಗೆ ಬಸ್ ಸೇವೆ ವಂಚಿತ ಗ್ರಾಮಗಳು: ರಾಜ್ಯದಲ್ಲಿ 1,749 ಗ್ರಾಮಗಳಿಗೆ ನೇರ ರಸ್ತೆ ಸಾರಿಗೆ ಬಸ್ ಸೌಲಭ್ಯವೇ ಇಲ್ಲ!

0
20

Updated By: Priyalachhi

ಬೆಂಗಳೂರು: ಪ್ರಗತಿಶೀಲ ರಾಜ್ಯ ಕರ್ನಾಟಕದ ಹಲವು ಗ್ರಾಮಗಳಿಗೆ ರಸ್ತೆ ಸಾರಿಗೆ ಬಸ್ ಗಳ ಸಂಚಾರವೇ ಇಲ್ಲ. ರಾಜ್ಯದಲ್ಲಿ ಸುಮಾರು 1,749 ಗ್ರಾಮಗಳು ನೇರ ಸಾರಿಗೆ ಬಸ್ ಸೌಲಭ್ಯವನ್ನೇ ಕಂಡಿಲ್ಲ.

ಕರ್ನಾಟಕ ರಾಜ್ಯ ಅತ್ಯಂತ ಪ್ರಗತಿಶೀಲ ರಾಜ್ಯ. ಇಂಥ ಪ್ರಗತಿಪರ ರಾಜ್ಯದಲ್ಲಿ ಈಗಲೂ ಸಂಪೂರ್ಣ ಸಾರಿಗೆ ಸೌಲಭ್ಯ ಇಲ್ಲವಾಗಿದೆ. ಹೌದು ನಂಬಲು ಕಷ್ಟವಾದರೂ ಇದು ಕಹಿ ಸತ್ಯ.‌ ಕರ್ನಾಟಕ ಇತರ ರಾಜ್ಯಗಳಿಗೆ ಹೋಲಿಸಿದರೆ ಸಾರಿಗೆ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕ ವ್ಯಾಪಿ ಸರ್ಕಾರ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಸಂಪರ್ಕ ಸಾಧಿಸಿದೆ. ಜನರ ಓಡಾಟಕ್ಕೆ ಅನುವಾಗುವಂತೆ ರಸ್ತೆ ಸಂಪರ್ಕವನ್ನು ಕಲ್ಪಿಸುತ್ತಿದೆ. ಸರ್ಕಾರಿ ಬಸ್ ಗಳ ಸೇವೆ ಮೂಲಕ ರಾಜ್ಯದ ಜನರಿಗೆ ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಯತ್ನಿಸುತ್ತಿದೆ.

ಆದರೆ, ಇಂಥ ಪ್ರಗತಿಶೀಲ ರಾಜ್ಯ ಕರ್ನಾಟಕದಲ್ಲಿ ಈಗಲೂ ಹಲವು ಹಳ್ಳಿಗಳಿಗೆ ಮೇರ ರಸ್ತೆ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಅಚ್ಚರಿ ಮೂಡಿಸುತ್ತಿದೆ. ಹಲವು ಗ್ರಾಮಗಳು ರಸ್ತೆ ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದಲ್ಲಿ ಎಲ್ಲಾ ಗ್ರಾಮಗಳಿಗೂ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ಇರುವುದು ರಾಜ್ಯದ ಪ್ರತಿಷ್ಠೆಗೆ ಕುಂದು ತರುವ ಸಂಗತಿಯಾಗಿದೆ.

1,749 ಗ್ರಾಮಗಳಿಗೆ ಸಾರಿಗೆ ಬಸ್​ ಸಂಚಾರವೇ ಮರೀಚಿಕೆ: ರಾಜ್ಯದಲ್ಲಿ ಸುಮಾರು 1,749 ಗ್ರಾಮಗಳಿಗೆ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದಿರುವುದು ಅಚ್ಚರಿ ಮೂಡಿಸುವ ವಿಚಾರವಾಗಿದೆ. ಪ್ರಗತಿಶೀಲ ರಾಜ್ಯದಲ್ಲಿ ಇಷ್ಟು ಗ್ರಾಮಗಳಿಗೆ ಸಾರಿಗೆ ಬಸ್ ಸಂಚಾರ ಇಲ್ಲದೇ ಇರುವುದು ಮುಜುಗರದ ವಿಚಾರವಾಗಿದೆ.‌ ಸಾರಿಗೆ ಇಲಾಖೆಯೇ ನೀಡಿರುವ ಮಾಹಿತಿಯಂತೆ ಕೆಎಸ್ಆರ್ ಟಿಸಿ ವ್ಯಾಪ್ತಿಯಲ್ಲಿ 17 ಜಿಲ್ಲೆಗಳು ಬರುತ್ತವೆ. ಇದರ ಕಾರ್ಯಾಚರಣೆ ವ್ಯಾಪ್ತಿಯಲ್ಲಿ ಒಟ್ಟು 8252 ಅನುಸೂಚಿಗಳಿಂದ 52,317 ಸುತ್ತುವಳಿಗಳ ಕಾರ್ಯಾಚರಣೆಯನ್ನು ನಡೆಸುತ್ತಿದೆ‌. ನಿಗಮದ ವ್ಯಾಪ್ತಿಯಲ್ಲಿ ಸುಮಾರು 21,748 ಗ್ರಾಮಗಳಿದ್ದು, ಇದರಲ್ಲಿ 20,090 ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. 1,658 ಗ್ರಾಮಗಳಿಗೆ ಸಾರಿಗೆ ಬಸ್ ಸೌಲಭ್ಯ ಇಲ್ಲವಾಗಿದೆ. ಈ ಸಾರಿಗೆ ಸೌಲಭ್ಯ ಒದಗಿಸದೇ ಇರುವ ಗ್ರಾಮಗಳ ಪೈಕಿ 234 ಗ್ರಾಮಗಳಿಗೆ ಭಾರಿ ವಾಹನ ಸಂಚಾರಕ್ಕೆ ಸೂಕ್ತ ರಸ್ತೆ ಇಲ್ಲವಾಗಿದೆ‌. 1658 ಗ್ರಾಮಗಳಿಗೆ 2 ಕಿ.ಮೀ.ಗೂ ಹತ್ತಿರದ ರಸ್ತೆ ಇರುವವರೆಗೂ ಸಾರಿಗೆ ಸೌಲಭ್ಯ ಒದಗಿಸಲಾಗುತ್ತಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ 6 ಕಂದಾಯ ಜಿಲ್ಲೆಗಳಲ್ಲಿ 4610 ಹಳ್ಳಿಗಳು ಇದ್ದು, 4565 ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 45 ಗ್ರಾಮಗಳಿಗೆ ಬಸ್ ಸಂಚಾರ ಯೋಗ್ಯ ರಸ್ತೆ ಇರದೇ ಇರುವುದರಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿಲ್ಲ. ಈ ಗ್ರಾಮಗಳಿಗೆ 2 ಕಿ.ಮೀ.ಗೂ ಹತ್ತಿರದ ರಸ್ತೆಯಿರುವವರೆಗೂ ಸಾರಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ ಒಟ್ಟು 5283 ಜನವಸತಿ ಗ್ರಾಮಗಳ ಪೈಕಿ 5237 ಗ್ರಾಮಗಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಉಳಿದ 46 ಗ್ರಾಮಗಳಿಗೆ ಭಾರಿ ವಾಹನ ಸಂಚಾರಕ್ಕೆ ಯೋಗ್ಯ ರಸ್ತೆ ಇಲ್ಲದ ಕಾರಣ, ಸಾರಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಗ್ರಾಮಗಳಿಗೂ 2 ಕಿ.ಮೀ.ಗೂ ಹತ್ತಿರದ ರಸ್ತೆಯಿರುವವರೆಗೂ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.

ಬೆಂಗಳೂರಿನ ಸುತ್ತಮುತ್ತ ಎಲ್ಲಾ ಕಡೆ ಬಿಎಂಟಿಸಿ ಬಸ್ ಓಡಾಟ: ಇತ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25 ಕಿ.ಮೀ. ವರೆಗೆ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದ್ದು, ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಗೆ ಒಳಪಡುವ ಹಾಗೂ ಬಸ್ಸುಗಳ ಕಾರ್ಯಾಚರಣೆಗೆ ಸೂಕ್ತ ರಸ್ತೆಗಳಿರುವ ಎಲ್ಲಾ ಪ್ರದೇಶಗಳಿಗೂ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.

ಈ ನಿಟ್ಟಿನಲ್ಲಿ ಪ್ರತಿದಿನ ಹವಾನಿಯಂತ್ರಿತ ಸಾರಿಗೆಗಳನ್ನು ಒಳಗೊಂಡಂತೆ 1,820 ಮಾರ್ಗಗಳಲ್ಲಿ 6,288 ಅನುಸೂಚಿಗಳನ್ನು 66,043 ಸುತ್ತುವಳಿಗಳೊಂದಿಗೆ 13.04 ಲಕ್ಷ ಕಿ.ಮೀ.ಗಳಲ್ಲಿ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ದಟ್ಟಣೆ/ಅವಶ್ಯಕತೆಗನುಗುಣವಾಗಿ ಕಾರ್ಯಾಚರಣೆ ಮಾಡುತ್ತಿದ್ದು, ಸರಾಸರಿ 44 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.

ಮಾರ್ಗ ಸಮೀಕ್ಷೆ ಕೈಗೊಂಡು ಪರಿಶೀಲನೆ: ಸಾರಿಗೆ ಸೌಲಭ್ಯವಿಲ್ಲದ ಗ್ರಾಮಗಳಿಗೆ ಬೇಡಿಕೆಗೆ ಅನುಗುಣವಾಗಿ ಗ್ರಾಮಗಳಿಗೆ ಹಂತ-ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಸಂಬಂಧ ಮಾರ್ಗ ಸಮೀಕ್ಷೆ ಕೈಗೊಂಡು ಪರಿಶೀಲಿಸಿ ಸಾರಿಗೆ ಸೌಲಭ್ಯವನ್ನು ಒದಗಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವರು ಲಿಖಿತವಾಗಿ ಉತ್ತರ ನೀಡಿದ್ದಾರೆ.‌

ಯಾವ ಜಿಲ್ಲೆಗಳಲ್ಲಿ ಎಷ್ಟು ಗ್ರಾಮಗಳಿಗೆ ಬಸ್ ಸೇವೆ ಇಲ್ಲ?

  • ಬೆಂಗಳೂರು ಗ್ರಾಮಾಂತರ- 9 ಗ್ರಾಮ
  • ಬೆಂಗಳೂರು ದಕ್ಷಿಣ- 9 ಗ್ರಾಮ
  • ತುಮಕೂರು- 156 ಗ್ರಾಮ
  • ಚಿಕ್ಕಬಳ್ಳಾಪುರ- 14 ಗ್ರಾಮ
  • ಮಂಡ್ಯ- 42 ಗ್ರಾಮ
  • ಚಿಕ್ಕಮಗಳೂರು- 250 ಗ್ರಾಮ
  • ಹಾಸನ- 1 ಗ್ರಾಮ
  • ಕೊಡಗು- 47 ಗ್ರಾಮ
  • ಉಡುಪಿ- 85 ಗ್ರಾಮ
  • ದಕ್ಷಿಣ ಕನ್ನಡ- 96 ಗ್ರಾಮ
  • ದಾವಣಗೆರೆ- 134 ಗ್ರಾಮ
  • ಶಿವಮೊಗ್ಗ- 364 ಗ್ರಾಮ
  • ಚಿತ್ರದುರ್ಗ- 445 ಗ್ರಾಮ
  • ಚಾಮರಾಜನಗರ- 6 ಗ್ರಾಮ
  • ಉತ್ತರ ಕನ್ನಡ- 25 ಗ್ರಾಮ
  • ಉ.ಕ/ಧಾರವಾಡ- 17 ಗ್ರಾಮ
  • ಬೆಳಗಾವಿ- 3 ಗ್ರಾಮ
  • ಕಲಬುರಗಿ- 5 ಗ್ರಾಮ
  • ಯಾದಗಿರಿ- 5 ಗ್ರಾಮ
  • ಬೀದರ್- 3 ಗ್ರಾಮ
  • ರಾಯಚೂರು- 13 ಗ್ರಾಮ
  • ಕೊಪ್ಪಳ- 5 ಗ್ರಾಮ
  • ಬಳ್ಳಾರಿ- 1 ಗ್ರಾಮ
  • ವಿಜಯನಗರ- 9 ಗ್ರಾಮ
sambrama prabha editor suresh kt

LEAVE A REPLY

Please enter your comment!
Please enter your name here