ಅಹಿಂದ ಅಧಿಪತ್ಯದ ಮೇಲೆ ‘ಸಾಹುಕಾರ್’ ಕಣ್ಣು: ಸತೀಶ್ ಜಾರಕಿಹೊಳಿಗೆ ವರವಾಯ್ತಾ ದಾವಣಗೆರೆ ದಂಗಲ್..?

0
14

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತರಿಗೆ ಹೇಗೆ ವೋಟ್​ ಬ್ಯಾಂಕ್​ ಇದೆಯೋ, ಅದೇ ರೀತಿ ಅಹಿಂದಗೂ ತನ್ನ ಮತಬ್ಯಾಂಕ್​ ಇದೆ. ಚೂರು ಚೂರಾಗಿದ್ದ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳಿಗೆ ಸಮಾಜವಾದದ ಬೆಸುಗೆ ಹಾಕಿದ್ದೇ ಸಿದ್ದರಾಮಯ್ಯ. ಇದೇ ಅಹಿಂದ ಬಲದಿಂದ ಸಿದ್ದರಾಮಯ್ಯ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯೂ ಆಗಿದ್ದಾರೆ. ಈಗ ಅವರ ಬಳಿಕ ಯಾರು ಈ ಅಹಿಂದ ಅಧಿಪತಿ ಎನ್ನುವ ಚರ್ಚೆ ಶುರುವಾಗಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಎದುರಾಗಿರುವ ಸಂದರ್ಭವೊಂದು ಸತೀಶ್ ಜಾರಕಿಹೊಳಿಯವರಿಗೆ ವರವಾಗಿ ಪರಿಣಮಿಸಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಳಿಕ, ರಾಜ್ಯ ಕಾಂಗ್ರೆಸ್‌ ಮುಸ್ಲಿಂ ನಾಯಕರ ಬಂಡಾಯ ಎದುರಿಸುತ್ತಿದೆ. ಅಲ್ಪಸಂಖ್ಯಾತರ ಮೆಚ್ಚಿನ ಪಕ್ಷ ಇದೀಗ ಅದೇ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಗುರಿಯಾಗಿದೆ.

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಾಸೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದ್ದು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥರಾಗಿದ್ದ ಕೆ.ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಕ್ರಮಗಳು ವಿಶೇಷವಾಗಿ ಅಲ್ಪಸಂಖ್ಯಾತ ಮತಬ್ಯಾಂಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಸತೀಶ್ ಜಾರಕಿಹೊಳಿ ಅವರು, ಇದೀಗ ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಬಳಿಕ ಅಹಿಂದ ಅಧಿಪತ್ಯವನ್ನು ಮುನ್ನಡೆಸುವ ತಂತ್ರ ಹೊಂದ್ದಾರೆಂದು ಹೇಳಲಾಗುತ್ತಿದೆ.

ಮೇ 4 ರಂದು ಉಪಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಎಚ್.ಸಿ.ಮಹದೇವಪ್ಪ ಮತ್ತು ಕೆ.ಎನ್.ರಾಜಣ್ಣ ಅವರೊಂದಿಗೆ ಜಾರಕಿಹೊಳಿ ದೆಹಲಿಗೆ ತೆರಳಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಅಲ್ಪಸಂಖ್ಯಾತ ನಾಯಕರ ವಿರುದ್ಧ ‘ಕಠಿಣ’ ಕ್ರಮ’ದಿಂದ ಪಕ್ಷದ ಭವಿಷ್ಯಕ್ಕೆ ಆಗಬಹುದಾದ ಹಾನಿ ಬಗ್ಗೆ ಮನವರಿಕೆ ಮಾಡಿಕೊಡಲು ಯೋಜನೆ ರೂಪಿಸಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇದೇ ಸಂದರ್ಭದಲ್ಲಿ ಜಮೀರ್ ಬೆನ್ನಿಗೆ ನಿಂತಿರುವ ಸಿದ್ದರಾಮಯ್ಯ ಅವರು, ನಿಮ್ಮ ನಿಲುವನ್ನು ಹೈಕಮಾಂಡ್’ಗೆ ವಿವರಿಸಿ ಎಂದು ಜಮೀರ್ ಅವರಿಗೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

sambrama prabha editor suresh kt

LEAVE A REPLY

Please enter your comment!
Please enter your name here