Updated By: Priyalachhi
ಬೆಂಗಳೂರು: ಅತೀವ್ರ ಚಳಿಗೆ ರಾಜ್ಯದ ಜನತೆ ತತ್ತರಿಸಿದ್ದು, ಈ ನಡುವೆ ಮುಂದಿನ ಎರಡು ದಿನಗಳ ಕಾಲ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ಚಳಿ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಆರೆಂಜ್ ಅಲರ್ಟ್ ಘೋಷಿಸಿದೆ.
ಬೀದರ್, ಕಲಬುರಗಿ, ವಿಜಯನಗರ, ಯಾದಗಿರಿ, ಬೆಳಗಾವಿ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದೇ ವೇಳೆ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಿಗೂ ಶೀತ ಗಾಳಿ ಎಚ್ಚರಿಕೆ ನೀಡಲಾಗಿದೆ.
ಡಿಸೆಂಬರ್ 20ರಂದು ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ.
ಐಎಂಡಿ ಅಂಕಿಅಂಶಗಳ ಪ್ರಕಾರ, ವಿಜಯಪುರದಲ್ಲಿ ಅತೀ ಕಡಿಮೆ 6.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಹಾಸನದಲ್ಲಿ 7 ಡಿಗ್ರಿ, ಬೀದರ್‌ನಲ್ಲಿ 7.4 ಡಿಗ್ರಿ ಹಾಗೂ ರಾಯಚೂರಿನಲ್ಲಿ 8.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಡಿಸೆಂಬರ್ 19ರಂದು ಐದು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿಗಿಂತ ಕಡಿಮೆ ದಾಖಲಾಗಿದ್ದು, ವಿಜಯಪುರದಲ್ಲಿ 7.4 ಡಿಗ್ರಿ ಹಾಗೂ ಬೀದರ್‌ನಲ್ಲಿ 7.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಡಿಸೆಂಬರ್ 18ರಂದು ರಾಯಚೂರಿನಲ್ಲಿ 9.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.



