Updated By: Priyalachhi
ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆ ಹಳ ಎಲ್ಲೂ ಹೋಗಿಲ್ಲ. ಯೋಜನೆಯ ಹಣ ದುರ್ಬಳಕೆಯಾಗಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಸಾವಿರ ಕೋಟಿ ರೂಪಾಯಿ ಹಣ ಎಲ್ಲಾದರೂ ನಾಪತ್ತೆಯಾದರೆ ಆದಾಯ ತೆರಿಗೆ ಇಲಾಖೆಯವರು ಸುಮ್ಮನೆ ಬಿಡುತ್ತಾರೆಯೇ? ಯೋಜನೆಯ ಹಣ ದುರುಪಯೋಗವಾಗಿಲ್ಲ. ಯೋಜನೆಯ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲವಾದ್ದರಿಂದ ದುರುಪಯೋಗದ ಆರೋಪಗಳು ಅಸತ್ಯ ಹಾಗೂ ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದರು.
ಯೋಜನೆಯ ಹಣವೇ ಇನ್ನೂ ಬಿಡುಗಡೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ದುರುಪಯೋಗದ ಆರೋಪ ಮಾಡುವುದು ಜನರನ್ನು ತಪ್ಪು ದಾರಿಗೆಳೆಸುವ ಪ್ರಯತ್ನವಾಗಿದೆ. ಯೋಜನೆಯ ಹಣದ ಬಗ್ಗೆ ಇರುವ ಗೊಂದಲ ಕುರಿತು ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಮಂತ್ರಿಗಳು ಶೀಘ್ರದಲ್ಲೇ ಸ್ಪಷ್ಟೀಕರಣ ನೀಡಲಿದ್ದಾರೆ. ಬಳಿಕ ಎಲ್ಲಾ ಗೊಂದಲಗಳು ನಿವಾರಣೆಯಾಗಲಿವೆ ಎಂದು ತಿಳಿಸಿದರು.
ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರವಸೆ ನೀಡಿದ ಅವರು, ಮಹಿಳೆಯರು ಚಿಂತಿಸಬೇಕಾದ ಅಗತ್ಯವಿಲ್ಲ. ಮುಂದಿನ ಕಂತುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಬಾಕಿ ಮೊತ್ತವೂ ಅದರೊಂದಿಗೆ ಖಾತೆಗೆ ಜಮೆಯಾಗಲಿದೆ, ಸರ್ಕಾರ ಗೃಹಲಕ್ಷ್ಮಿ ಯೋಜನೆ ಮುಂದುವರೆಸಲು ಸಂಪೂರ್ಣ ಬದ್ಧವಾಗಿದೆ ಎಂದರು.



