Updated By: Priyalachhi
ಬೆಂಗಳೂರು/ನವದೆಹಲಿ: ಸೋಮವಾರದಿಂದ ಜಿಬಿಎ ಚುನಾವಣೆಗೆ ಅರ್ಜಿ ಸ್ವೀಕಾರ ಮಾಡಲಾಗುವುದು. ಮೀಸಲಾತಿ ಇನ್ನು ಅಂತಿಮವಾಗಿಲ್ಲವಾದರೂ 369 ವಾರ್ಡ್ಗಳಲ್ಲಿ ಸ್ಪರ್ಧಿಸಲು ಯಾರಿಗೆಲ್ಲಾ ಆಸಕ್ತಿ ಇದೆ ಎಂದು ತಿಳಿಯಲು ಅರ್ಜಿ ಕರೆಯಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಭಾನುವಾರ ಮಾತನಾಡಿದ ಅವರು, ಶನಿವಾರ ಸಚಿವರ ಜೊತೆ ಚರ್ಚಿಸಿ ಈ ಅರ್ಜಿ ಜೊತೆಗೆ ಪಡೆಯುವ ಹಣವನ್ನು ಪಕ್ಷದ ಕಟ್ಟಡ ನಿಧಿಗೆ ಬಳಸಲು ತೀರ್ಮಾನಿಸಲಾಗಿದೆ. ಸಾಮಾನ್ಯ ವರ್ಗಕ್ಕೆ 50 ಸಾವಿರ, ಮಹಿಳೆಯರು ಹಾಗೂ ಪರಿಶಿಷ್ಟ ಸಮುದಾಯದವರಿಗೆ 25 ಸಾವಿರ ರೂ. ನಿಗದಿಪಡಿಸಲಾಗಿದೆ. ಆನ್ಲೈನ್ ಅರ್ಜಿ ಹಾಕಲು ಅವಕಾಶ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮತಗಳ್ಳತನ ಹೋರಾಟ ಮುಂದುವರಿಕೆ: ಮತಗಳ್ಳತನ ವಿರುದ್ಧದ ಹೋರಾಟ ಇಲ್ಲಿಗೆ ಮುಗಿಯುವುದೇ ಎಂದು ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಮತಗಳ್ಳತನ ವಿರುದ್ಧ ನಾವು ಆರಂಭಿಸಿರುವ ಹೋರಾಟ ಮುಂದುವರೆಯಲಿದೆ. ಪ್ರತಿ ಕ್ಷೇತ್ರದಲ್ಲಿ ನಾವು ಲೀಗಲ್ ಬ್ಯಾಂಕ್ ಸ್ಥಾಪಿಸುತ್ತೇವೆ. ನಮ್ಮ ಪಕ್ಷದ ಪರ ಇರುವ ವಕೀಲರನ್ನು ಇದರಲ್ಲಿ ಸೇರಿಸಲಾಗುವುದು. ಇವರು ನಮ್ಮ ಕಾರ್ಯಕರ್ತರಿಗೆ ಕಾನೂನು ಸಲಹೆ ನೀಡುತ್ತಾರೆ ಎಂದರು.
ಜಿ.ಸಿ. ಚಂದ್ರಶೇಖರ್ ಅವರು ಬಿಎಲ್ಎ ಗುರುತಿನ ಚೀಟಿ ನೀಡಲು ತಯಾರು ಮಾಡಿಕೊಂಡಿದ್ದಾರೆ. ಎಐಸಿಸಿಯಿಂದ ಒಪ್ಪಿಗೆ ಪಡೆಯಲು ತೆಗೆದುಕೊಂಡು ಹೋಗಲಾಗುವುದು. ನಾವು ಇಡೀ ದೇಶದಲ್ಲಿಯೇ ಅತಿಹೆಚ್ಚು ಸಹಿ ಸಂಗ್ರಹ ಮಾಡಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ಜನರ ಉತ್ಸಾಹ ಮುಂದಿನ ಚುನಾವಣೆಗಳಿಗೆ ನಾಂದಿ: ದೆಹಲಿ ಪ್ರತಿಭಟನೆಯಲ್ಲಿ ಜನರಲ್ಲಿದ್ದ ಉತ್ಸಾಹವು 2028 ಹಾಗೂ 2029ರ ಚುನಾವಣೆಗೆ ನಾಂದಿ ಹಾಡಿದೆ. ಈ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಇದೆ ಎಂದು ಪಕ್ಷ ಉಳಿಸಿಕೊಳ್ಳಲು ಕಾರ್ಯಕರ್ತರು ಸಜ್ಜಾಗಿದ್ದಾರೆ. ಇದರಿಂದ ಸಂತೋಷವಾಗಿದೆ, ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದೆ. ಅಧಿಕಾರ ಸಿಗದ ಕಾರ್ಯಕರ್ತರು ಕೂಡ ತಮ್ಮ ಹಣದಲ್ಲಿ ಈ ಪ್ರತಿಭಟನೆಗೆ ಆಗಮಿಸಿದ್ದಾರೆ ಎಂದರು.
ನಾಯಕರು ಕುಶಲೋಪರಿ ವಿಚಾರಿಸುತ್ತಾರೆ: ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, ನಮ್ಮ ನಾಯಕರಿಗೆ ನನ್ನನ್ನು ನೋಡಿದ ತಕ್ಷಣ ಅರ್ಥವಾಗುತ್ತದೆ. ನನ್ನ ಕುಶಲೋಪರಿ ವಿಚಾರಿಸುತ್ತಾರೆ. ಇದು ಸೌಹಾರ್ದಯುತ ಭೇಟಿ, ವೈಯಕ್ತಿಕ ಭೇಟಿ ಅಲ್ಲ. ಇದರ ಹೊರತಾಗಿ ಬೇರೆ ವಿಚಾರಗಳನ್ನು ನಿಮ್ಮ ಮುಂದೆ ಬಹಿರಂಗಪಡಿಸಲು ಆಗುವುದಿಲ್ಲ. ಅದರ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಬಹಳ ವರ್ಷಗಳ ನಂತರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೀರಿ ಎಂದು ಕೇಳಿದಾಗ, ಇದು ಸುಳ್ಳು, ನಾವು ಭೇಟಿಯಾಗಿದ್ದಾಗ ಹೇಳಿಕೊಳ್ಳುವುದಿಲ್ಲ ಎಂದರು.
ಭಾನುವಾರದ ಭೇಟಿಯಲ್ಲಿ ನಿಮಗೆ ಅಭಯ ಸಿಕ್ಕಿದೆಯಂತೆ, ಸಮಸ್ಯೆ ಬಗೆಹರಿಯಲಿದೆ ಎಂದು ಕೇಳಿದಾಗ, ನಿಮ್ಮ ಅರ್ಥ ಏನಿದೆಯೋ, ನನಗೆ ಯಾವ ಸಮಸ್ಯೆ ಇಲ್ಲ. ನೀವು ಸಮಸ್ಯೆ ಸೃಷ್ಟಿಸುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದರು.



