ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಲೋಕಸಭೆಯಲ್ಲಿ ನಿನ್ನೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಗೆ ಸೋಲಾಗಿದೆ. ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಏರಿಸುವ ಸಂವಿಧಾನ ತಿದ್ದುಪಡಿ ಮಸೂದೆ ಇದಾಗಿತ್ತು. ಈ ಮಸೂದೆ ಪಾಸಾಗಲು ಮೂರನೇ ಎರಡರಷ್ಟು ಮತಗಳು ಸಿಗಬೇಕಿತ್ತು. ಆದರೆ ವಿಪಕ್ಷಗಳ ವಿಶ್ವಾಸ ಗಳಿಸುವಲ್ಲಿ ಮೋದಿ ಸರ್ಕಾರ ಎಡವಿತು. ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿಯ ಮಸೂದೆಗಳನ್ನು ಇಂಡಿಯಾ ಕೂಟ ಸೋಲಿಸಿದೆ.
ಚಲಾವಣೆಯಾದ 489 ಮತಗಳ ಪೈಕಿ ಪರವಾಗಿ 278 ಮತಗಳು, ವಿರುದ್ಧವಾಗಿ 211 ಚಲಾವಣೆಯಾಗಿದ್ದು 71 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಯಿತು. ಇದನ್ನು ದಕ್ಷಿಣ ರಾಜ್ಯದ ಪ್ರಾದೇಶಿಕ ಪಕ್ಷಗಳು ಸಂಭ್ರಮಿಸಿದ್ದವು. ಇದಕ್ಕೆ ಕಾರಣ ಈ ಮಸೂದೆ ಅಂಗೀಕಾರವಾದರೆ ದಕ್ಷಿಣ ರಾಜ್ಯಗಳು ಕೇಂದ್ರ ಸರ್ಕಾರ ರಚನೆಯಲ್ಲಿ ಬಲ ಕಳೆದುಕೊಳ್ಳುತ್ತವೆ ಅಂತ. ಆದರೆ ಕೇಂದ್ರದಲ್ಲಿ ಎನ್‌ಡಿಎಗೆ ಬೆಂಬಲ ಕೊಟ್ಟಿರುವ ಜೆಡಿಎಸ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿ ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಈ ಮಸೂದೆ ಪರ ಬ್ಯಾಟ್ ಬೀಸಿವೆ.



