ನಮ್ಮನ್ನು ಪ್ರಶ್ನಿಸಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ: ಸಿಎಂ

0
29

Updated By: Priyalachhi

ಮೈಸೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ಈಗ ನಮ್ಮನ್ನು ಪ್ರಶ್ನಿಸಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಸಿಬಿಐಗೆ ಕೊಟ್ಟಿದ್ದರೆ ನಮ್ಮನ್ನು ಕೇಳಬಹುದು. ನಾವು ಅಧಿಕಾರದಲ್ಲಿದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಎಂದರು.

ಬಳ್ಳಾರಿ ಪ್ರಕರಣ ಸಂಬಂಧ ಬಿಜೆಪಿ ಜನಾಂದೋಲನ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದಲ್ಲಿರುವಾಗ ಯಾವ ಆಂದೋಲನ, ಪ್ರತಿಭಟನೆಗಳನ್ನು ಮಾಡುತ್ತಾರೆ ಎನ್ನುವುದು ಅವರ ಪಕ್ಷಕ್ಕೆ ಸೇರಿದ ವಿಚಾರ ಎಂದರು.

ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬಂದಾಗ ನಮಗೆ ಸಾರ್ವಜನಿಕ ಸಭೆ ನಡೆಸಲು ಎಲ್ಲೂ ಸ್ಥಳವನ್ನು ನೀಡಲಿಲ್ಲ. ಕೊನೆಗೆ ಕುರುಬರ ದೇವಸ್ಥಾನದ ಬಳಿ ಸಭೆ ನಡೆಸಿದೆವು. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇದೆ ಎನ್ನಲು ಇದೊಂದು ಉದಾಹರಣೆ ಸಾಕು ಎಂದರು.

ಸಂಸದೀಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲ. ಗೂಂಡಾಗಿರಿ ಮಾಡುತ್ತಿದ್ದವರಿಂದ ನಾವು ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅದರ ಆಶಯಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಎಂದ ಅವರು, ಕಾಂಗ್ರೆಸ್​ನವರು ರಿಪಬ್ಲಿಕ್ ಆಫ್ ಕರ್ನಾಟಕ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾಂಗ್ರೆಸ್ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅದರ ಆಶಯಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಜನಾಂದೋಲನದ ಹಿಂದೆ ರಾಜಕೀಯ ಉದ್ದೇಶ ಬಿಟ್ಟರೆ ಬೇರೇನಿದೆ? ಎಂದು ಕಿಡಿಕಾರಿದರು.

sambrama prabha editor suresh kt

LEAVE A REPLY

Please enter your comment!
Please enter your name here