ವಾಸ್ತವ ಅರಿಯದೆ ನಮ್ಮ ರಾಜ್ಯದ ವಿಚಾರಗಳ ಕುರಿತು ಮಾತನಾಡಬಾರದು: ಕೇರಳ ಸಿಎಂಗೆ ಡಿಸಿಎಂ ತಿರುಗೇಟು

0
45

Updated By: Priyalachhi

ಬೆಂಗಳೂರು: “ಕೋಗಿಲು ಕ್ರಾಸ್‌ನಲ್ಲಿರುವ ಅಕ್ರಮ ವಸತಿಗಳನ್ನು ತೆರವುಗೊಳಿಸಿರುವುದರ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ವಾಸ್ತವ ಅರ್ಥಮಾಡಿಕೊಳ್ಳದೆ ಟೀಕಿಸಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಪ್ರತಿಕ್ರಿಯಿಸಿದ ಡಿಸಿಎಂ, “ಕಾನೂನಾತ್ಮಕವಾಗಿ ಅಧಿಕಾರಿಗಳು ಮಾಡಬೇಕಿರುವ ಕೆಲಸವನ್ನು ಮಾಡಿದ್ದಾರೆ. ಹಿರಿಯ ನಾಯಕರಾದ ಪಿಣರಾಯಿ ವಿಜಯನ್ ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಮಾತನಾಡಿರುವುದು ದುರಾದೃಷ್ಟಕರ. ತ್ಯಾಜ್ಯವನ್ನು ಡಂಪ್​​​ ಮಾಡಲು 9 ವರ್ಷಗಳ ಹಿಂದೆಯೇ ನೋಟಿಫೈ ಮಾಡಿ, ನಿಗದಿಯಾಗಿದ್ದ ಸ್ಥಳದಲ್ಲಿ ಕೆಲ ಸ್ಥಳೀಯರು, ಇನ್ನೂ ಕೆಲವರು ಬೇರೆಡೆಯಿಂದ ಬಂದವರು ಅಕ್ರಮವಾಗಿ ವಸತಿ ಪ್ರದೇಶಗಳನ್ನು ನಿರ್ಮಿಸಿಕೊಂಡಿದ್ದರು”.

“ಅಲ್ಲಿ ನೆಲೆಸುವುದರಿಂದ ಆರೋಗ್ಯದ ಅಪಾಯಗಳೂ ಸಹ ಇರುವುದರಿಂದ ವಸತಿ ಪ್ರದೇಶಗಳನ್ನು ತೆರವುಗೊಳಿಸಲಾಗಿದೆ. ಇಂಥಹ ವಿಚಾರಗಳಲ್ಲಿ ಪಿಣರಾಯಿ ವಿಜಯನ್ ಅವರಂಥಹ ಹಿರಿಯ ನಾಯಕರು ವಾಸ್ತವ ಅರಿಯದೆ ಮಾತನಾಡಬಾರದು. ಬೆಂಗಳೂರಿನ ಬಗ್ಗೆ ನಮಗೆ ಅರಿವಿದೆ, ಈ ರೀತಿಯ ಭೂ ಮಾಫಿಯಾವನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ. ಸೂಕ್ತ ದಾಖಲೆಗಳನ್ನು ಹೊಂದಿರುವ ಅರ್ಹರಿಗೆ ಬೇರೆ ಮನೆಗಳನ್ನು ನಾವು ನೀಡಲಿದ್ದೇವೆ” ಎಂದು ಡಿಸಿಎಂ ತಿಳಿಸಿದರು.

“ಪಿಣರಾಯಿ ವಿಜಯನ್ ಅವರು ವಾಸ್ತವ ಅರಿತು ಮಾತನಾಡಬೇಕು. ನಾವು ಯಾವುದೇ ರೀತಿಯ ಬುಲ್ಡೋಜರ್ ಕಾರ್ಯಾಚರಣೆಗಳನ್ನು ಮಾಡಿಲ್ಲ. ಬೆಂಗಳೂರು ನಗರ ಮುಂಬೈ ಮತ್ತಿತರ ನಗರಗಳಂತಲ್ಲ, ಇಲ್ಲಿ ಹೆಚ್ಚು ಸ್ಲಂಗಳಿಲ್ಲ ಹಾಗೂ ನಾವು ಸ್ಲಂಗಳ ನಿರ್ಮಾಣಕ್ಕೂ ಅವಕಾಶ ನೀಡುವುದಿಲ್ಲ. ಇದು ಯಾವುದೋ ಅಲ್ಪಸಂಖ್ಯಾತ ಅಥವಾ ಯಾವುದೋ ಸಮುದಾಯದ ಪ್ರಶ್ನೆಯಲ್ಲ. ನಗರದ ಹೃದಯಭಾಗದಲ್ಲಿ ಯಾರೋ ಬಂದು ಆ ರೀತಿ ಒತ್ತುವರಿ ಮಾಡಿ ವಸತಿ ಪ್ರದೇಶಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ. ಸ್ಥಳೀಯ ಶಾಸಕ ಕೃಷ್ಣಬೈರೇಗೌಡ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರೂ ಸಹ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಯಾರಾದರೂ ಸೂಕ್ತ ದಾಖಲೆಗಳನ್ನು ಹೊಂದಿದ್ದರೆ ಸರ್ಕಾರದಿಂದ ಅವರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ” ಎಂದು ಅವರು ತಿಳಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here