Updated By: Priyalachhi
ಮುಂಬೈ: ಬುಧವಾರ ಬೆಳಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ದುರಂತ ಮತ್ತು ಅಕಾಲಿಕ ಮರಣವು ರಾಜ್ಯದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ನಿರ್ವಾತವನ್ನು ಉಂಟುಮಾಡಿರುವುದರ ಜೊತೆಗೆ ಎನ್‌ಸಿಪಿಯ ಭವಿಷ್ಯದ ಮೇಲೆಯೂ ಕರಿನೆರಳು ಬೀರಿದೆ.
ಅಜಿತ್ ಪವಾರ್ ನಿಧನದ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನಾಯಕತ್ವದ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಯಿದೆ. ಏಕೆಂದರೆ, ಪಕ್ಷಕ್ಕೆ ಎರಡನೇ ನಾಯಕ ಇಲ್ಲ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.
‘ಗಡಿಯಾರ’ದ ಚಿಹ್ನೆಯನ್ನು ಹೊಂದಿರುವ ಪಕ್ಷವು ತನ್ನ ನಿರ್ವಿವಾದ ನಾಯಕನನ್ನು ಕಳೆದುಕೊಂಡಿರುವುದರಿಂದ, ಪಕ್ಷದ ಉಳಿವು ಮತ್ತು ಏಪ್ರಿಲ್‌ನಲ್ಲಿ ರಾಜ್ಯಸಭಾ ಸದಸ್ಯತ್ವ ಕೊನೆಗೊಳ್ಳಲಿರುವ ಅದರ ಸಂಸ್ಥಾಪಕ ಶರದ್ ಪವಾರ್ ಅವರೊಂದಿಗೆ ಭವಿಷ್ಯದ ಸಮೀಕರಣದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಇತ್ತೀಚಿನ ತಿಂಗಳುಗಳಲ್ಲಿ ಬಣಗಳ ನಡುವಿನ ಸಂಬಂಧ ಸುಧಾರಿಸಿದ್ದು, ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಜೊತೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತೆ ಒಂದಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಇದೀಗ ಅಜಿತ್ ಪವಾರ್ ಜೊತೆಗಿದ್ದ 41 ಶಾಸಕರು ಶರದ್ ಪವಾರ್ ಕಡೆಗೆ ವಾಲದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೋಡಿಕೊಳ್ಳಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.



