100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಳಿಸಿದ ಇಂಡಿಗೋ

0
30

Updated By: Priyalachhi

ಮುಂಬೈ/ದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಬುಧವಾರ ವಿವಿಧ ವಿಮಾನ ನಿಲ್ದಾಣಗಳಲ್ಲಿ 100ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಸಿಬ್ಬಂದಿ ಕೊರತೆಯಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದು ತಿಳಿದು ಬಂದಿದ್ದು, ಸಾವಿರಾರು ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ.

ಡಿಜಿಸಿಎ ತನಿಖೆ: ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ವು ವಿಮಾನಗಳ ಕಾರ್ಯಾಚರಣೆಗೆ ಉಂಟಾದ ಅಡೆತಡೆಯನ್ನು ತನಿಖೆ ಮಾಡುತ್ತಿದೆ. ಪ್ರಸ್ತುತ ಪರಿಸ್ಥಿತಿಗೆ ನಿಖರ ಕಾರಣ ಮತ್ತು ವಿಮಾನ ರದ್ದತಿ ಹಾಗು ವಿಳಂಬವನ್ನು ತಗ್ಗಿಸುವ ನಿಟ್ಟಿನಲ್ಲಿ ಹಾಕಿಕೊಂಡಿರುವ ಯೋಜನೆಯನ್ನು ಸಲ್ಲಿಸುವಂತೆಯೂ ಇಂಡಿಗೋವನ್ನು ಕೇಳಿದೆ.

ಇಂಡಿಗೋ ಹೇಳಿದ್ದೇನು?: ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಗೋ ವಕ್ತಾರರು, ಕಳೆದೆರಡು ದಿನಗಳಿಂದ ಅನಿರೀಕ್ಷಿತ ಕಾರ್ಯಾಚರಣೆಯ ತೊಂದರೆಗಳನ್ನು ಎದುರಿಸುತ್ತಿದ್ದು, ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸುತ್ತೇವೆ. ಸಣ್ಣ ತಾಂತ್ರಿಕ ದೋಷಗಳು, ಚಳಿಗಾಲಕ್ಕೆ ಸಂಬಂಧಿಸಿದ ವೇಳಾಪಟ್ಟಿ ಬದಲಾವಣೆಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿ, ವಾಯುಯಾನ ವ್ಯವಸ್ಥೆಯಲ್ಲಿ ಹೆಚ್ಚಿದ ದಟ್ಟಣೆ ಮತ್ತು ನವೀಕರಿಸಿದ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಜಾರಿ (ವಿಮಾನ ಕರ್ತವ್ಯ ಸಮಯ ಮಿತಿಗಳು-FDTL) ನಮ್ಮ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿವೆ ಎಂದು ತಿಳಿಸಿದ್ದಾರೆ.

ಭಾರತೀಯ ವಿಮಾನಯಾನ ಪೈಲಟ್‌ಗಳ ಸಂಘದ ಪ್ರತಿಕ್ರಿಯೆ: ಸಿಬ್ಬಂದಿ ಸಮಸ್ಯೆಯಿಂದಾಗಿ ಇಂಡಿಗೋ ಸಂಸ್ಥೆಯಲ್ಲಿ ಕಾರ್ಯಾಚರಣೆಯ ಅಡಚಣೆಗಳು ಉಂಟಾಗಿವೆ. ಇದು ಪ್ರಬಲ ವಿಮಾನಯಾನ ಸಂಸ್ಥೆಗಳ ಪೂರ್ವಭಾವಿ ಸಂಪನ್ಮೂಲ ಯೋಜನೆಯ ವೈಫಲ್ಯವನ್ನು ಸೂಚಿಸುತ್ತವೆ. ಅದಷ್ಟೇ ಅಲ್ಲದೇ, ಹೊಸ ವಿಮಾನ ಕರ್ತವ್ಯ ಹಾಗು ಸಮಯ ಮಿತಿ ಮಾನದಂಡಗಳನ್ನು ತೆಗೆದು ಹಾಕಲು ಡಿಜಿಸಿಎ ಮೇಲೆ ಒತ್ತಡ ಹೇರುವ ಪ್ರಯತ್ನವೂ ಇರಬಹುದು ಎಂದು ಭಾರತೀಯ ವಿಮಾನಯಾನ ಪೈಲಟ್‌ಗಳ ಸಂಘ (ALPA) ತಿಳಿಸಿದೆ.

sambrama prabha editor suresh kt

LEAVE A REPLY

Please enter your comment!
Please enter your name here