Updated By: Priyalachhi
ಭಾರತ ಜಾಗತಿಕ ಆಕರ್ಷಣಾ ಕೇಂದ್ರವಾಗಿ ಬೆಳೆದಿದೆ. ಇದಕ್ಕೆ ಕಾರಣ ನಮ್ಮ ಜನರಲ್ಲಿ ಆವಿಷ್ಕಾರದ ಕುರಿತಿರುವ ಹುಮ್ಮಸ್ಸು. ಇಂದು ಜಗತ್ತು ಭಾರತವನ್ನು ಭರವಸೆ ಮತ್ತು ಆತ್ಮಸ್ಥೈರ್ಯದ ದೇಶವಾಗಿ ನೋಡುತ್ತಿದೆ. ಮುಂದಿನ ಪೀಳಿಗೆಯ ಸುಧಾರಣೆಗಳೊಂದಿಗೆ ಪ್ರಗತಿಯ ವೇಗವನ್ನು ಅವರು ಮೆಚ್ಚಿದ್ದು, ಇದು ವಿವಿಧ ವಲಯಗಳನ್ನು ಒಳಗೊಂಡಿರುವ ಜೊತೆಗೆ ದೇಶದ ಬೆಳವಣಿಗೆಯ ಸಾಮರ್ಥ್ಯವನ್ನು ಏರಿಸಿದೆ.
ಭಾರತ ಸುಧಾರಣೆಯಲ್ಲಿ ಎಕ್ಸ್ಪ್ರೆಸ್ ಪ್ರಯಾಣ ಮಾಡುತ್ತಿದೆ ಎಂದು ನಾನು ಅನೇಕರಿಗೆ ಹೇಳುತ್ತಿರುತ್ತೇನೆ. ಈ ಸುಧಾರಣಾ ಎಕ್ಸ್ಪ್ರೆಸ್ನ ಪ್ರಾಥಮಿಕ ಎಂಜಿನ್ ಜನಸಂಖ್ಯೆ. ನಮ್ಮ ಯುವ ಪೀಳಿಗೆ ಮತ್ತು ಜನರ ಅದಮ್ಯ ಚೈತನ್ಯ ಇದಕ್ಕೆ ಕಾರಣ.
2025 ಭಾರತಕ್ಕೆ ಸ್ಮರಣೀಯ ವರ್ಷವಾಗಿತ್ತು. ಕಳೆದ 11 ವರ್ಷಗಳಿಂದ ದೇಶದ ನಿರ್ಮಾಣ ಕಾರ್ಯ ನಿರಂತರ ರಾಷ್ಟ್ರೀಯ ಧ್ಯೇಯವಾಗಿ ಸುಧಾರಣೆಗಳ ಮೇಲೆ ಕೇಂದ್ರೀಕರಣಗೊಂಡಿದೆ. ನಾವು ದೀರ್ಘಕಾಲದ ಅಡಿಪಾಯ ಮತ್ತು ಬೆಳವಣಿಗೆಯನ್ನು ಒಳಗೊಳ್ಳುವ ಮೂಲಕ ಸಂಸ್ಥೆಗಳನ್ನು ಆಧುನೀಕರಣಗೊಳಿಸಿದ್ದು, ಆಡಳಿತವನ್ನು ಸರಳ ಮತ್ತು ಬಲಗೊಳಿಸಿದ್ದೇವೆ.
ಉನ್ನತ ಆಶಾವಾದದೊಂದಿಗೆ ವೇಗದ ಕಾರ್ಯಗತಗೊಳಿಸುವಿಕೆ ಮತ್ತು ಆಳ ಸುಧಾರಣಾ ಕ್ರಮಗಳ ಮೂಲಕ ನಿರ್ಣಾಯಕವಾಗಿ ಮುಂದುವರೆದಿದ್ದೇವೆ. ಈ ಸುಧಾರಣೆಗಳು ನಾಗರಿಕರು ಘನತೆಯಿಂದ ಬದುಕಲು, ಉದ್ಯಮಿಗಳು ಆತ್ಮವಿಶ್ವಾಸದಿಂದ ಹೊಸತನವನ್ನು ಕಂಡುಕೊಳ್ಳಲು ಮತ್ತು ಸಂಸ್ಥೆಗಳು ಸ್ಪಷ್ಟತೆ ಮತ್ತು ವಿಶ್ವಾಸದಿಂದ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಗುರಿಗಳನ್ನು ಹೊಂದಿವೆ. ಇಂಥ ಸುಧಾರಣಾ ಕ್ರಮಗಳ ಕುರಿತು ನಾವು ತೆಗೆದುಕೊಂಡಿರುವ ಪ್ರಮುಖ ಹೆಜ್ಜೆಗಳಿಗೆ ಉದಾಹರಣೆಗಳು ಇಲ್ಲಿವೆ.
ಜಿಎಸ್ಟಿ ಸುಧಾರಣೆ:
- ಶೇ.5 ಮತ್ತು 18ರ ಎರಡು ಸ್ಲ್ಯಾಬ್ ರಚನೆ ಜಾರಿ ಮಾಡಿರುವುದು.
- ಗೃಹ ನಿರ್ವಹಣೆ, ಎಂಎಸ್ಎಂಇಗಳು, ರೈತರು ಮತ್ತು ಕಾರ್ಮಿಕ ತೀವ್ರ ವಲಯಗಳ ಮೇಲಿನ ಹೊರೆ ಕಡಿತ
- ವಿವಾದ ಕಡಿತ ಮತ್ತು ಉತ್ತಮ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಉದ್ಧೇಶ
- ಈ ಸುಧಾರಣೆ ಗ್ರಾಹಕರ ಭಾವನೆ ಮತ್ತು ಬೇಡಿಕೆಯನ್ನು ಹೆಚ್ಚಿಸಿದೆ. ಹಬ್ಬದ ಋತುಮಾನದಲ್ಲಿ ಮಾರಾಟವನ್ನು ಹೆಚ್ಚಿಸಿದೆ.
ಮಧ್ಯಮ ವರ್ಗಕ್ಕೆ ಕೊಡುಗೆ:
- ಮೊದಲಿಗೆ, ವಾರ್ಷಿಕವಾಗಿ 12 ಲಕ್ಷ ರೂ ಆದಾಯ ತೆರಿಗೆ ಮುಕ್ತ.
- 1961ರ ಬಳಕೆಯಲ್ಲಿಲ್ಲದ ಆದಾಯ ತೆರಿಗೆ ಕಾಯ್ದೆಯನ್ನು ಆಧುನಿಕ ಮತ್ತು ಸರಳ ಆದಾಯ ತೆರಿಗೆ ಕಾಯ್ದೆ- 2025ರೊಂದಿಗೆ ಬದಲಾವಣೆ
- ಈ ಸುಧಾರಣೆಗಳು ಭಾರತದ ಪಾರದರ್ಶಕ, ತಂತ್ರಜ್ಞಾನ ಆಧಾರಿತ ತೆರಿಗೆ ಆಡಳಿತದತ್ತ ಸಾಗುವಿಕೆಯನ್ನು ಗುರುತಿಸುತ್ತಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ:
- 100 ಕೋಟಿ ರೂ.ವರೆಗೆ ವಹಿವಾಟು ಹೊಂದಿರುವ ಸಂಸ್ಥೆಗಳನ್ನು ಸಣ್ಣ ಕಂಪನಿಗಳಿಗೆ ಸೇರಿಸಿ, ವಿಸ್ತರಿಸಲಾಗಿದೆ.
- ಸಾವಿರಾರು ಕಂಪನಿಗಳಿಗೆ ಅನುಸರಣೆ ಹೊರೆಗಳು ಮತ್ತು ಸಂಬಂಧಿತ ವೆಚ್ಚಗಳು ಕಡಿಮೆಯಾಗುತ್ತವೆ.
-
ವಿಮೆಯಲ್ಲಿ ಶೇ.100ರಷ್ಟು ಎಫ್ಡಿಐ:
- ಭಾರತೀಯ ವಿಮಾ ಕಂಪನಿಗಳಲ್ಲಿ ಶೇ.100ರಷ್ಟು ಎಫ್ಡಿಐಗೆ ಅನುಮತಿ. ಇದು ವಿಮಾ ವ್ಯವಸ್ಥೆಯ ಜನರಿಗೆ ಭದ್ರತೆ ನೀಡುತ್ತದೆ.
- ಸ್ಪರ್ಧೆಯ ಜೊತೆಗೆ ಜನರಿಗೆ ಉತ್ತಮ ವಿಮಾ ಆಯ್ಕೆ ಮತ್ತು ಸುಧಾರಿತ ಸೇವಾ ವಿತರಣೆ ನೀಡುತ್ತದೆ.
ಸೆಕ್ಯುರಿಟೀಸ್ ಮಾರುಕಟ್ಟೆ ಸುಧಾರಣೆ:
- ಸಂಸತ್ತಿನಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆ ಸಂಹಿತೆ ಮಸೂದೆಯನ್ನು ಪರಿಚಯಿಸಲಾಗಿದೆ. ಇದು ಸೆಬಿಯಲ್ಲಿ ಆಡಳಿತ ಮಾನದಂಡ ಮತ್ತು ಹೂಡಿಕೆದಾರರ ರಕ್ಷಣೆ ಹೆಚ್ಚಿಸುತ್ತದೆ. ಅನುಸರಣೆ ಹೊರೆ ಕಡಿಮೆ ಮಾಡುತ್ತದೆ. ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನಚಾಲಿತ ಸೆಕ್ಯುರಿಟೀಸ್ ಮಾರುಕಟ್ಟೆಯನ್ನು ಸಕ್ರಿಯಗೊಳಿಸುತ್ತದೆ.
- ಸುಧಾರಣೆಗಳು ಕಡಿಮೆಯಾದ ಅನುಸರಣೆ ಮತ್ತು ಇತರ ಓವರ್ಹೆಡ್ಗಳಿಂದಾಗಿ ಉಳಿತಾಯವನ್ನು ಖಚಿತಪಡಿಸುತ್ತವೆ.
ಸಾಗರ ಮತ್ತು ನೀಲಿ ಆರ್ಥಿಕತೆ ಸುಧಾರಣೆ:
- ಚಳಿಗಾಲದ ಅಧಿವೇಶನವೊಂದರಲ್ಲೇ ಐದು ಮಹತ್ವದ ಸಾಗರ ಮಸೂದೆಗಳನ್ನು ಅಂಗೀಕರಿಸಲಾಯಿತು. ಸರಕು ಸಾಗಣೆ ಮಸೂದೆ-2025; ಸಮುದ್ರದ ಮೂಲಕ ಸರಕುಗಳ ಸಾಗಣೆ ಮಸೂದೆ-2025, ಕರಾವಳಿ ಸಾಗಣೆ ಮಸೂದೆ- 2025, ವ್ಯಾಪಾರಿ ಸಾಗಣೆ ಮಸೂದೆ- 2025 ಮತ್ತು ಭಾರತೀಯ ಬಂದರು ಮಸೂದೆ-2025.
- ಈ ಸುಧಾರಣೆಗಳು ದಾಖಲಾತಿಯನ್ನು ಸರಳಗೊಳಿಸುತ್ತವೆ. ವಿವಾದ ಪರಿಹಾರವನ್ನು ಸುಲಭಗೊಳಿಸಿ, ಸಾಗಣೆ ವೆಚ್ಚ ಕಡಿಮೆ ಮಾಡುತ್ತವೆ.
- 1908, 1925 ಮತ್ತು 1958ರ ಹಿಂದಿನ ಹಳೆಯ ಕಾಯಿದೆಗಳನ್ನೂ ಸಹ ಬದಲಾಯಿಸಲಾಗಿದೆ.
- ಜನ ವಿಶ್ವಾಸ್. ಅಪರಾಧೀಕರಣದ ಯುಗವನ್ನು ಕೊನೆಗೊಳಿಸುವುದಾಗಿದೆ.
- ನೂರಾರು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ.
- 2025ರ ರದ್ದತಿ ಮತ್ತು ತಿದ್ದುಪಡಿ ಮಸೂದೆಯ ಮೂಲಕ 71 ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ.
ವ್ಯಾಪಾರ ಸುಲಭ ಮತ್ತು ವೃದ್ಧಿ:
- ಸಿಂಥೆಟಿಕ್ ಫೈಬರ್ಗಳು, ನೂಲುಗಳು, ಪ್ಲಾಸ್ಟಿಕ್ಗಳು, ಪಾಲಿಮರ್ಗಳು ಮತ್ತು ಮೂಲ ಲೋಹಗಳಲ್ಲಿ ಒಟ್ಟು 22 ಕ್ಯೂಸಿಒಗಳನ್ನು ರದ್ದುಗೊಳಿಸಲಾಗಿದೆ. 53 ಕ್ಯೂಸಿಒಗಳನ್ನು ವಿವಿಧ ಉಕ್ಕು, ಎಂಜಿನಿಯರಿಂಗ್, ವಿದ್ಯುತ್, ಮಿಶ್ರಲೋಹ ಮತ್ತು ಗ್ರಾಹಕ ಅಂತಿಮ ಉತ್ಪನ್ನ ವಿಭಾಗಗಳಲ್ಲಿ ಅಮಾನತುಗೊಳಿಸಲಾಗಿದೆ. ಇದು ಕೈಗಾರಿಕಾ ಮತ್ತು ಗ್ರಾಹಕ ವಸ್ತುಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡಿದೆ.
- ಉಡುಪು ರಫ್ತಿನಲ್ಲಿ ಭಾರತದ ಪಾಲು ಹೆಚ್ಚಿಸುತ್ತದೆ. ಪಾದರಕ್ಷೆಗಳು, ಆಟೋಮೊಬೈಲ್ಗಳಂತಹ ವೈವಿಧ್ಯಮಯ ಕೈಗಾರಿಕೆಗಳಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಮಾಡುತ್ತದೆ. ಎಲೆಕ್ಟ್ರಾನಿಕ್ಸ್, ಬೈಸಿಕಲ್ಗಳು ಮತ್ತು ಆಟೋಮೋಟಿವ್ ಉತ್ಪನ್ನಗಳಿಗೆ ದೇಶೀಯ ಗ್ರಾಹಕರಿಗೆ ಕಡಿಮೆ ಬೆಲೆಗಳನ್ನು ಖಚಿತಪಡಿಸುತ್ತದೆ.
ಐತಿಹಾಸಿಕ ಕಾರ್ಮಿಕ ಸುಧಾರಣೆ:
- ಕಾರ್ಮಿಕ ಕಾನೂನುಗಳನ್ನು ಮರುರೂಪಿಸಲಾಗಿದ್ದು, 29 ಕಾನೂನುಗಳನ್ನು ನಾಲ್ಕು ಆಧುನಿಕ ಸಂಹಿತೆಗಳಾಗಿ ವಿಲೀನಗೊಳಿಸಲಾಗಿದೆ.
- ಭಾರತ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವುದರ ಜೊತೆಗೆ ಕಾರ್ಮಿಕರ ಹಿತಾಸಕ್ತಿಗಳನ್ನು ಭದ್ರಪಡಿಸುವ ಕಾರ್ಮಿಕ ಚೌಕಟ್ಟನ್ನು ರಚಿಸಿದೆ.
- ಈ ಸುಧಾರಣೆಗಳು ನ್ಯಾಯಯುತ ವೇತನ, ಸಕಾಲಿಕ ವೇತನ ಪಾವತಿ, ಸುಗಮ ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಸುರಕ್ಷಿತ ಕೆಲಸದ ಸ್ಥಳಗಳ ಮೇಲೆ ಕೇಂದ್ರೀಕರಿಸುತ್ತವೆ.
- ಉದ್ಯೋಗಗಳಲ್ಲಿ ಹೆಚ್ಚಿನ ಮಹಿಳಾ ಭಾಗಿತ್ವವನ್ನು ಖಚಿತಪಡಿಸುತ್ತದೆ.
- ಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ಇಎಸ್ಐಸಿ ಮತ್ತು ಇಪಿಎಫ್ಒ ಅಡಿಯಲ್ಲಿ ತರಲಾಗಿದ್ದು, ಔಪಚಾರಿಕ ಕಾರ್ಯಪಡೆಯ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ.
ಭಾರತೀಯ ಉತ್ಪನ್ನಗಳಿಗೆ ವೈವಿಧ್ಯಮಯ ಮತ್ತು ವಿಸ್ತೃತ ಮಾರುಕಟ್ಟೆಗಳು:
- ನ್ಯೂಜಿಲೆಂಡ್, ಓಮನ್ ಮತ್ತು ಬ್ರಿಟನ್ ಜೊತೆ ವ್ಯಾಪಾರ ಒಪ್ಪಂದಗಳು ನಡೆದಿದೆ. ಇದು ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತವೆ. ಜಾಗತಿಕ ಆರ್ಥಿಕತೆಯಲ್ಲಿ ವಿಶ್ವಾಸಾರ್ಹ ಮತ್ತು ಸ್ಪರ್ಧಾತ್ಮಕ ಪಾಲುದಾರನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತವೆ.
- ಸ್ವಿಟ್ಜರ್ಲೆಂಡ್, ನಾರ್ವೆ, ಐಸ್ಲ್ಯಾಂಡ್ ಮತ್ತು ಲಿಚ್ಟೆನ್ಸ್ಟೈನ್ ಒಳಗೊಂಡ ಯುರೋಪಿಯನ್ ಮುಕ್ತ ವ್ಯಾಪಾರ ಸಂಘದೊಂದಿಗೆ ಎಫ್ಟಿಎ ಕಾರ್ಯಗತಗೊಳಿಸಲಾಗಿದೆ. ಇದು ಅಭಿವೃದ್ಧಿ ಹೊಂದಿದ ಯುರೋಪಿಯನ್ ಆರ್ಥಿಕತೆಗಳೊಂದಿಗೆ ಭಾರತದ ಮೊದಲ ಎಫ್ಟಿಎ ಆಗಿದೆ.
ಪರಮಾಣು ಶಕ್ತಿ ಸುಧಾರಣೆ:
- ಭಾರತದ ಶುದ್ಧ ಇಂಧನ ಮತ್ತು ತಂತ್ರಜ್ಞಾನ ಪ್ರಯಾಣದಲ್ಲಿ ಶಾಂತಿ ಕಾಯ್ದೆ ಒಂದು ಪರಿವರ್ತನಾ ಹೆಜ್ಜೆ.
- ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನದ ಸುರಕ್ಷಿತ, ಸುಭದ್ರ ಮತ್ತು ಜವಾಬ್ದಾರಿಯುತ ವಿಸ್ತರಣೆಗೆ ಬಲವಾದ ಚೌಕಟ್ಟನ್ನು ಖಚಿತಪಡಿಸುತ್ತದೆ.
- ಎಐ ಯುಗದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಭಾರತವನ್ನು ಶಕ್ತಗೊಳಿಸುತ್ತದೆ. ಉದಾಹರಣೆಗೆ, ವಿದ್ಯುತ್ ದತ್ತಾಂಶ ಕೇಂದ್ರಗಳು, ಮುಂದುವರಿದ ಉತ್ಪಾದನೆ, ಹಸಿರು ಹೈಡ್ರೋಜನ್ ಮತ್ತು ಉನ್ನತ ತಂತ್ರಜ್ಞಾನದ ಕೈಗಾರಿಕೆಗಳಾಗಿದೆ.
- ಆರೋಗ್ಯ ರಕ್ಷಣೆ, ಕೃಷಿ, ಆಹಾರ ಭದ್ರತೆ, ನೀರಿನ ನಿರ್ವಹಣೆ, ಕೈಗಾರಿಕೆ, ಸಂಶೋಧನೆ ಮತ್ತು ಪರಿಸರ ಸುಸ್ಥಿರತೆಯಲ್ಲಿ ಪರಮಾಣು ತಂತ್ರಜ್ಞಾನಗಳ ಶಾಂತಿಯುತ ಅನ್ವಯವನ್ನು ಉತ್ತೇಜಿಸುತ್ತದೆ. ಸಮಗ್ರ ಬೆಳವಣಿಗೆ ಮತ್ತು ಸುಧಾರಿತ ಜೀವನಮಟ್ಟವನ್ನು ಬೆಂಬಲಿಸುತ್ತದೆ.
- ಖಾಸಗಿ ವಲಯದ ಭಾಗವಹಿಸುವಿಕೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಭಾರತದ ಯುವಕರು ಗಡಿನಾಡಿನ ತಂತ್ರಜ್ಞಾನಗಳು ಮತ್ತು ಮುಂದಿನ ಪೀಳಿಗೆಯ ಇಂಧನ ಪರಿಹಾರಗಳಲ್ಲಿ ಮುನ್ನಡೆಸಲು ಅವಕಾಶಗಳನ್ನು ಸೃಷ್ಟಿಸುತ್ತದೆ.
- ಹೂಡಿಕೆದಾರರು, ನಾವೀನ್ಯಕಾರರು ಮತ್ತು ಸಂಸ್ಥೆಗಳು ಭಾರತದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು, ಹೂಡಿಕೆ ಮಾಡಲು, ನಾವೀನ್ಯತೆ ನೀಡಲು ಮತ್ತು ಶುದ್ಧ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸಿದ್ಧವಾದ ಇಂಧನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಇದು ಸೂಕ್ತ ಕ್ಷಣವಾಗಿದೆ.
ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಮಹತ್ವದ ಸುಧಾರಣೆ:
- ವಿಕಸಿತ್ ಭಾರತ್-ಜಿ ರಾಮ್ ಜಿ ಕಾಯ್ದೆ-2025 ರೋಜ್ಗಾರ್ ಗ್ಯಾರಂಟಿಯ ಉದ್ಯೋಗ ಖಾತರಿಯನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಿದೆ.
- ಗ್ರಾಮ ಮೂಲಸೌಕರ್ಯ ಮತ್ತು ಜೀವನೋಪಾಯವನ್ನು ಬಲಪಡಿಸುವ ವೆಚ್ಚವನ್ನು ಹೆಚ್ಚಿಸುತ್ತದೆ.
- ಗ್ರಾಮೀಣ ಕೆಲಸವನ್ನು ಹೆಚ್ಚಿನ ಆದಾಯ ಮತ್ತು ಉತ್ತಮ ಆಸ್ತಿಗಳನ್ನು ಖಚಿತಪಡಿಸಿಕೊಳ್ಳುವ ಸಾಧನವಾಗಿ ಪರಿವರ್ತಿಸುವುದು ಇದರ ಉದ್ದೇಶ.
ಶೈಕ್ಷಣಿಕ ಸುಧಾರಣೆ:
- ಸಂಸತ್ತಿನಲ್ಲಿ ಮಸೂದೆ ಮಂಡಿಸಲಾಗಿದೆ.
- ಏಕ, ಏಕೀಕೃತ ಉನ್ನತ ಶಿಕ್ಷಣ ನಿಯಂತ್ರಕವನ್ನು ಸ್ಥಾಪಿಸಲಾಗುವುದು.
- ಯುಜಿಸಿ, ಎಐಸಿಟಿಇ, ಎನ್ಸಿಟಿಇಯಂತಹ ಬಹು ಅತಿಕ್ರಮಿಸುವ ಸಂಸ್ಥೆಗಳನ್ನು ವಿಕಸಿತ್ ಭಾರತ್ ಶಿಕ್ಷಾ ಅಧಿಷ್ಠಾನದಿಂದ ಬದಲಾವಣೆ
- ಸಾಂಸ್ಥಿಕ ಸ್ವಾಯತ್ತತೆಯನ್ನು ಬಲಪಡಿಸುವುದು, ನಾವೀನ್ಯತೆ ಮತ್ತು ಸಂಶೋಧನೆಗೆ ಉತ್ತೇಜನ ನೀಡಲಾಗುವುದು.
2025ರ ಈ ಎಲ್ಲ ಸುಧಾರಣೆಗಳು ಮಹತ್ವದ್ದಾಗಿದ್ದು, ಅವುಗಳು ಕೇವಲ ಆಯಾಮ ಮಾತ್ರವಲ್ಲದೆ, ಮೂಲ ತತ್ವಶಾಸ್ತ್ರವೂ ಆಗಿದೆ. ಆಧುನಿಕ ಪ್ರಜಾಪ್ರಭುತ್ವದ ಉತ್ಸಾಹದಲ್ಲಿ ನಮ್ಮ ಸರ್ಕಾರ ನಿಯಂತ್ರಣಕ್ಕಿಂತ ಸುಗಮಗೊಳಿಸುವಿಕೆಯ ಸಹಯೋಗಕ್ಕೆ ಆದ್ಯತೆ ನೀಡಿದೆ.
ಈ ಸುಧಾರಣೆಗಳನ್ನು ಸಣ್ಣ ವ್ಯವಹಾರಗಳು, ಯುವ ವೃತ್ತಿಪರರು, ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ವಾಸ್ತವಗಳನ್ನು ಗುರುತಿಸಿ, ಸಹಾನುಭೂತಿಯಿಂದ ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ಸಮಾಲೋಚನೆಯ ಮೂಲಕ ರೂಪಿಸಲಾಗಿದೆ. ದತ್ತಾಂಶದಿಂದ ಮಾರ್ಗದರ್ಶನ ನೀಡಲಾಗಿದೆ. ಭಾರತದ ಸಾಂವಿಧಾನಿಕ ಮೌಲ್ಯಗಳಲ್ಲಿ ಆಧಾರವಾಗಿದ್ದು, ನಿಯಂತ್ರಣ ಆಧಾರಿತ ಆರ್ಥಿಕತೆಯಿಂದ ನಂಬಿಕೆಯ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತದೆ. ನಾಗರಿಕರ ಕೇಂದ್ರಿತ ದೀರ್ಘ ಪ್ರಯತ್ನಗಳಿಗೆ ಅವು ವೇಗ ನೀಡುತ್ತವೆ.



