Updated By: Priyalachhi
ಬೆಂಗಳೂರು: ರಾಜ್ಯದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ವಿನ್ಯಾಸ ಕ್ಷೇತ್ರದ ವಿಸ್ತರಣೆಯನ್ನು ಗುರಿಯಾಗಿ ಇಟ್ಟುಕೊಂಡು 150 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ಹಾಗೂ ಹೂಡಿಕೆ ಸಾಧ್ಯವಾಗುವಂತೆ ವಿಷನ್ ಡಾಕ್ಯುಮೆಂಟ್ ತಯಾರಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗುರುವಾರ ವಿಧಾನಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷ ಪಂಕಜ್ ಮಹೀಂದ್ರೂ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜೊತೆ ಅವರು ವಿಸ್ತೃತ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಯನ್ನು ಘೋಷಿಸಿದೆ. ಇದಕ್ಕೆ ಸಮಾನಾಂತರವಾಗಿ ರಾಜ್ಯ ಸರ್ಕಾರವು ಕೂಡ ಒಂದು ಯೋಜನೆಯನ್ನು ರೂಪಿಸಲು ಚಿಂತಿಸುತ್ತಿದ್ದು, ಇದರ ಕಾರ್ಯಸಾಧ್ಯತೆಯ ಕುರಿತು ಅಧ್ಯಯನ ಮಾಡುತ್ತಿದೆ. ಇದು ಕರಡು ಹಂತದಲ್ಲಿದ್ದು, ಇದಕ್ಕೆ ಐಸಿಇಎ ನೀಡುವ ಸಲಹೆಗಳನ್ನು ಸ್ವಾಗತಿಸಲಾಗುವುದು ಎಂದಿದ್ದಾರೆ.
ಮೊಬೈಲ್ ಫೋನ್ ಬಿಡಿಭಾಗಗಳು ಮಾತ್ರವಲ್ಲದೆ ಕೈಗಾರಿಕಾ ಎಲೆಕ್ಟ್ರಾನಿಕ್ಸ್, ಕಾರ್ಯತಂತ್ರ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕೂಡ ಅಪಾರ ಅವಕಾಶಗಳಿವೆ. ಅಧಿಕಾರಿಗಳಿಗೆ ಕೇಂದ್ರ ಸರ್ಕಾರದ ಯೋಜನೆ ಮತ್ತು ಇತರೆ ರಾಜ್ಯಗಳಲ್ಲಿ ಇರುವ ಇಂತಹ ಯೋಜನೆಗಳ ಅಧ್ಯಯನ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಂಕಜ್ ಮಹೀಂದ್ರೂ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಸಬ್-ಅಸೆಂಬ್ಲಿ (ಡಿಸ್-ಪ್ಲೇ, ಕ್ಯಾಮರಾ ಮಾಡ್ಯೂಲ್ಸ್), ಬೇರ್ ಕಾಂಪೊನೆಂಟ್ಸ್ ಮತ್ತು ತಯಾರಿಕೆಗೆ ಬೇಕಾಗುವ ಸಾಧನಗಳಿಗೆ ಒತ್ತು ಕೊಡಲಾಗಿದೆ. ಇದಲ್ಲದೆ, ವಹಿವಾಟನ್ನು ಆಧರಿಸಿ ಪ್ರೋತ್ಸಾಹ ಭತ್ಯೆಗಳು, ಶೇಕಡ 25ರಷ್ಟು ಬಂಡವಾಳ ಸಬ್ಸಿಡಿ ಬೆಂಬಲ ಕೊಡಲಾಗುವುದು. ಈ ಯೋಜನೆಗೆ ಕೇಂದ್ರ ಸರ್ಕಾರವು 22,900 ಕೋಟಿ ರೂ. ವಿನಿಯೋಗಿಸುತ್ತಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಈ ವರ್ಷದ ನವೆಂಬರ್ ತನಕ 7,172 ಕೋಟಿ ರೂ. ಮೊತ್ತದ 17 ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಇದರಿಂದ 11,800 ನೇರ ಉದ್ಯೋಗಗಳು ಸೃಷ್ಟಿಯಾಗಲಿದ್ದು, 65 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಉತ್ಪನ್ನಗಳು ತಯಾರಾಗಲಿವೆ ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಸುದ್ದಿ, ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿ: ಆಧುನಿಕ ಬಗೆಯ ಕೈಗಾರಿಕೋದ್ಯಮಗಳ ಮಹತ್ವವನ್ನು ಅರಿತಿರುವ ರಾಜ್ಯ ಸರ್ಕಾರ 200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ. ಇಲ್ಲಿ ಈ ತರಹದ ಕಂಪನಿಗಳಿಗೆ ಬೇಕಾಗುವ ಸಕಲ ಸೌಕರ್ಯಗಳನ್ನೂ ಕಲ್ಪಿಸಲಾಗುವುದು. ಇದು ದೇಶ ಮತ್ತು ರಾಜ್ಯ ಮಟ್ಟದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ನಾವೀನ್ಯತಾ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದು ಇತ್ತೀಚೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದರು.



