Updated By: Priyalachhi
ಬೆಳಗಾವಿ: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ವರದಿಯಾಗಿರುವ ಬಗ್ಗೆ ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಮೊನ್ನೆ ಕಂಪನಿಯೊಂದರ ಮೊಟ್ಟೆಯ ಉಪಯೋಗ ಮಾಡಬಾರದು ಅಂತ ವಿಡಿಯೋವೊಂದು ವೈರಲ್ ಆಗಿತ್ತು. ಕಂಪನಿಯ ಮೊಟ್ಟೆಯಲ್ಲಿ ಉಪಯೋಗ ಮಾಡಬಾರದು, ಆ್ಯಂಟಿ ಬಯೋಟೆಕ್ ಅಂಶ ಇದೆ ಎಂಬ ಬಗ್ಗೆ ಮಾಹಿತಿ ಬಂದಿತ್ತು. ಇದರ ಕುರಿತಂತೆ ಸ್ಪಷ್ಟವಾದ ವಿಚಾರ ತಿಳಿದುಕೊಳ್ಳಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಮೊಟ್ಟೆ ಸ್ಯಾಂಪಲ್ ಪಡೆಯಲಾಗಿದೆ; ಏಕೆಂದರೆ ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿ ಗೊಂದಲ ಇದ್ದರೆ, ನಾವು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮ ಇಲಾಖೆಗೆ ಹೇಳಿದ್ದೇನೆ. ಈಗಾಗಲೇ ಕಂಪನಿಯ ಮೊಟ್ಟೆ ಸ್ಯಾಂಪಲ್ ಪಡೆಯಲಾಗಿದೆ. ಟೆಸ್ಟ್ ಮಾಡಿದ ನಂತರ ಈ ವಿಚಾರವನ್ನು ತಮ್ಮ ಮುಂದೆ ಇಡುವೆ. ಸದ್ಯಕ್ಕೆ ಇದರ ಬಗ್ಗೆ ಆತಂಕ ಪಡುವುದು ಬೇಡ ಎಂದು ತಿಳಿಸಿದರು.
ಕಳೆದ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಿನಲ್ಲಿ 125 ಮೊಟ್ಟೆಯ ಸ್ಯಾಂಪಲ್ ಟೆಸ್ಟ್ ಮಾಡಿದ್ದೇವೆ. ಅದರಲ್ಲಿ 123 ಮೊಟ್ಟೆಯ ಸ್ಯಾಂಪಲ್ ಗುಣಮಟ್ಟ ಸರಿಯಿದೆ. ಒಂದು, ಎರಡು ಮೊಟ್ಟೆಯ ಸ್ಯಾಂಪಲ್ ಮಾತ್ರ ಸರಿಯಿಲ್ಲ ಎಂದು ಬಂದಿತ್ತು. ಇದರಿಂದ ಯಾವುದೋ ಸುದ್ದಿ ಕೇಳಿ ಆತಂಕ, ಭಯಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಮನವಿ ಮಾಡಿದರು.
ಮೊಟ್ಟೆ ತೆಗೆದುಕೊಳ್ಳುವುದು ಬೇಡ ಅಂತ ಹೇಳಬಾರದು. ಸದ್ಯ ಸಮಾಧಾನವಾಗಿ ಇರೋಣ, ವರದಿ ಬರಲಿ. ಅದರಲ್ಲಿ ಆರೋಪಿತ ಕಂಪನಿಯದ್ದು ಏನಾದರೂ ಇದೆಯಾ, ಇಲ್ವಾ ಅಂತ ತಿಳಿಯೋಣ. ಇನ್ನೂ ರಿಪೋರ್ಟ್ ಬರಬೇಕು ಎಂದು ಗುಂಡೂರಾವ್ ಸ್ಪಷ್ಟಪಡಿಸಿದರು.
ಶಾಮನೂರು ಶಿವಶಂಕರಪ್ಪಗೆ ಸಂತಾಪ: ಇದೇ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಶಾಮನೂರು ಶಿವಶಂಕರಪ್ಪ ಅವರು ಮೃತರಾಗಿರುವುದು ಅತ್ಯಂತ ದುಃಖಕರ ವಿಷಯ. ದಾವಣಗೆರೆಯ ಚಿತ್ರಣವನ್ನೇ ಬದಲು ಮಾಡಿದ ಹಿರಿಮೆ ಅವರಿಗೆ ಸಲ್ಲುತ್ತದೆ. ಹಲವು ಶಿಕ್ಷಣ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿದ್ದರು. ಸಚಿವರಾಗಿ, ಶಾಸಕರಾಗಿ, ಕಾಂಗ್ರೆಸ್ ಪಕ್ಷದಲ್ಲಿ ಖಜಾಂಚಿಯಾಗಿ ಸೇವೆ ಸಲ್ಲಿಸಿದವರು ಎಂದು ನೆನೆದರು.



