Updated By: Priyalachhi
ಬೆಂಗಳೂರು: ವಿಧಾನಸಭೆಯಲ್ಲಿ ಫೋನ್ ಟ್ಯಾಪಿಂಗ್ ವಿಚಾರ ಸದ್ದು ಮಾಡಿತು. ದೆಹಲಿಯಿಂದ, ಕೇಂದ್ರ ಗೃಹ ಸಚಿವರಿಂದ ರಾಜಭವನಕ್ಕೆ ಫೋನ್ ಬರುತ್ತದೆ ಎಂಬ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಆರೋಪ ವಿಪಕ್ಷಗಳನ್ನು ಕೆರಳಿಸಿತು.
ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆ ವೇಳೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದಂತೆ ರಾಜ್ಯಪಾಲರಿಗೆ ಕೇಂದ್ರ ಗೃಹ ಸಚಿವರಿಂದ, ದೆಹಲಿ ಬಿಜೆಪಿ ಕಚೇರಿಯಿಂದ ಫೋನ್ಗಳು ಬಂದಿದ್ದವು ಎಂದು ಆರೋಪಿಸಿದರು. ಈ ಆರೋಪ ಬಿಜೆಪಿ ಸದಸ್ಯರನ್ನು ಕೆರಳಿಸಿತು. ಆರ್.ಅಶೋಕ್, ಸುನೀಲ್ ಕುಮಾರ್, ಸುರೇಶ್ ಕುಮಾರ್ ಸೇರಿದಂತೆ ಹಲವರು ಕಾಂಗ್ರೆಸ್ ಮೇಲೆ ಮುಗಿಬಿದ್ದರು. ರಾಜ್ಯಪಾಲರಿಗೆ ಬಿಜೆಪಿ ಕಚೇರಿಯಿಂದ ಫೋನ್ಗಳು ಬಂದಿರೋದು ಸರ್ಕಾರಕ್ಕೆ ಹೇಗೆ ಗೊತ್ತಾಯ್ತು?, ಸರ್ಕಾರ ಫೋನ್ ಟ್ಯಾಪ್ ಮಾಡ್ತಿದೆಯಾ ಅಂತ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ರು.
ಸುನಿಲ್ ಕುಮಾರ್ ಮಾತನಾಡಿ, ರಾಜ್ಯಭವನದ ಫೋನ್ ಟ್ಯಾಪಿಂಗ್ ನಡೆಯುತ್ತಿದೆಯೇ?. ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ಯಾರು ಕದ್ದಾಲಿಕೆ ಮಾಡುತ್ತಿದ್ದಾರೆ?. ಮೊನ್ನೆ ಕೂಡ ಕಾನೂನು ಸಚಿವರು ಇದೇ ಆರೋಪ ಮಾಡಿದ್ದರು. ಅವರ ಬಳಿ ಅಧಿಕೃತ ದಾಖಲೆ ಇದ್ದರೆ ಸದನದಲ್ಲಿ ಮಂಡಿಸಲಿ. ವಿವರಣೆ ಕೊಡಲಿ ಎಂದು ಒತ್ತಾಯಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ. ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿಲ್ಲವೇ?, ಕೇಶವ ಕೃಪಾದಿಂದಲೂ ಫೋನ್ ಹೋಗುತ್ತದೆ. ಯಾರು ಮಾಡಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರದಿಂದ ತಿಳಿದುಕೊಳ್ಳಿ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ನೀವು ಬೇಕಾದ್ರೆ ತನಿಖೆಗೆ ಕೇಳಿ. ನಾವು ತನಿಖೆಗೆ ವಹಿಸುತ್ತೇವೆ ಎಂದರು. ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ, ಇದು ಫೋನ್ ಟ್ಯಾಪ್ ಸರ್ಕಾರನಾ?. ಆರ್ಎಸ್ಎಸ್, ಬಿಜೆಪಿ ಕಚೇರಿಯಿಂದ ಫೋನ್ ಮಾಡೋದು ಸರ್ಕಾರಕ್ಕೆ ಹೇಗೆ ಗೊತ್ತಾಗುತ್ತೆ?. ನಮ್ಮ ಪೋನ್ಗಳನ್ನೂ ಸರ್ಕಾರ ಟ್ಯಾಪ್ ಮಾಡ್ತಿದೆ. ಈ ಹಿಂದೆ ಫೋನ್ ಟ್ಯಾಪ್ ಮಾಡಿದ ಸರ್ಕಾರಗಳು ಬಿದ್ದು ಹೋಗಿವೆ ಅಂತ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.



