ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಡಯಾಬಿಟಿಸ್ (ಮಧುಮೇಹ) ದೇಹದ ಹಲವಾರು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸಾಕಷ್ಟು ಮಂದಿಗೆ ತಿಳಿದೇ ಇರುತ್ತದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದರಿಂದ ಕಣ್ಣುಗಳಿಗೂ ಗಂಭೀರ ಹಾನಿ ಉಂಟಾಗಬಹುದು ಎಂಬುದನ್ನು ಅನೇಕರು ಗಮನಿಸುವುದಿಲ್ಲ.
ದೀರ್ಘಕಾಲ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ಕಣ್ಣಿನ ರೆಟಿನಾದ ಸೂಕ್ಷ್ಮ ರಕ್ತನಾಳಗಳು ಹಾನಿಗೊಳಗಾಗಿ ಡಯಾಬಿಟಿಕ್ ರೆಟಿನೋಪತಿ, ಕಾಟರಾಕ್ಟ್ ಮತ್ತು ಗ್ಲೂಕೋಮಾ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.
ಆದರೆ, ಸಮಸ್ಯೆಯನ್ನು ಸರಿಯಾದ ಜೀವನಶೈಲಿ ಮತ್ತು ಕೆಲವು ಸರಳ ಅಭ್ಯಾಸಗಳ ಮೂಲಕ ದೂರಾಗಿಸಿಕೊಳ್ಳಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಿ
ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಮುಖ್ಯವಾದದ್ದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಇರಿಸುವುದು. ಸಕ್ಕರೆ ಮಟ್ಟ ಹೆಚ್ಚು ಇದ್ದರೆ ರೆಟಿನಾದಲ್ಲಿರುವ ಸೂಕ್ಷ್ಮ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದ ಮಸುಕಾದ ದೃಷ್ಟಿ, ರೆಟಿನಾದಲ್ಲಿ ದ್ರವ ಸೋರಿಕೆ, ರಕ್ತಪೂರೈಕೆ ಕಡಿಮೆಯಾಗುವುದು, ಕ್ರಮೇಣ ದೃಷ್ಟಿ ಹಾನಿಯಾಗುವ ಸಮಸ್ಯೆ ಎದುರಾಗುತ್ತದೆ.
ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸಿ
ಮಧುಮೇಹ ಇರುವವರಲ್ಲಿ ಹೆಚ್ಚಿನ ರಕ್ತದೊತ್ತಡ ಕಣ್ಣಿನ ಸಮಸ್ಯೆಯನ್ನು ಮತ್ತಶ್ಟು ಹೆಚ್ಚಿಸುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇದ್ದರೆ ರೆಟಿನಾದ ರಕ್ತಪ್ರಸರಣ ಸುಧಾರಿಸುತ್ತದೆ, ಕಣ್ಣಿನಲ್ಲಿ ರಕ್ತಸ್ರಾವದ ಅಪಾಯ ಕಡಿಮೆಯಾಗುತ್ತದೆ ಮತ್ತು ಡಯಾಬಿಟಿಕ್ ರೆಟಿನೋಪತಿ ತೀವ್ರಗೊಳ್ಳುವುದನ್ನು ತಡೆಯಬಹುದು.
ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ
ಡಯಾಬಿಟಿಕ್ ಕಣ್ಣಿನ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ವರ್ಷಕ್ಕೊಮ್ಮೆ ಡಿಲೇಟೆಡ್ ಐ ಎಕ್ಸಾಮಿನೇಷನ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ.
ಈ ಪರೀಕ್ಷೆಯಿಂದ ಮೈಕ್ರೋ ಅನ್ಯೂರಿಸಮ್, ರೆಟಿನಾ ಊತ, ಅಸಾಮಾನ್ಯ ರಕ್ತನಾಳಗಳ ಬೆಳವಣಿಗೆ, ಮ್ಯಾಕ್ಯುಲರ್ ಬದಲಾವಣೆಗಳನ್ನು ಆರಂಭದಲ್ಲೇ ಪತ್ತೆಹಚ್ಚಬಹುದು.



