ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಅಧಿಕಾರಿಗಳಿಗೆ ಸಿಎಂ ಚಾಟಿ

0
47

Updated By: Priyalachhi

ಮೈಸೂರು: ಜನರನ್ನು ಸರ್ಕಾರಿ ಕೆಲಸಗಳಿಗಾಗಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡಿಸುವುದನ್ನು ನಾನು ಸಹಿಸುವುದಿಲ್ಲ. ಈ ರೀತಿಯ ಧೋರಣೆ ಅಕ್ಷಮ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಮೈಸೂರಿನಲ್ಲಿಂದು ಜಿಲ್ಲಾ ಕೆಡಿಪಿ ಸಭೆಯಲ್ಲಿ ಆರಂಭಿಕವಾಗಿ ಮಾತನಾಡಿದ ಅವರು, ಅಧಿಕಾರಿಗಳು ಜಿಲ್ಲಾ ಕೇಂದ್ರಗಳಲ್ಲೇ ವಾಸಿಸುತ್ತಿರುವುದೇಕೆ? ತಾಲ್ಲೂಕು ಕೇಂದ್ರಗಳಲ್ಲಿ ನೆಲೆಸಿ, ಜನರ ಸಮಸ್ಯೆ ಕೇಳದೇ ಇರುವ ಅಧಿಕಾರಿಗಳ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿ ಮತ್ತು ಸಿಬ್ಬಂದಿ ಜನ ಸೇವೆ ಮಾಡುವುದಾಗಿ ಪ್ರಮಾಣ ಮಾಡಿ ಹುದ್ದೆ ಸ್ವೀಕರಿಸಿದ್ದಾರೆ. ಅದಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು. ಅನಗತ್ಯವಾಗಿ ಜನರನ್ನು ಅಲೆದಾಡಿಸಬಾರದು ಎಂದು ತರಾಟೆಗೆ ತೆಗೆದುಕೊಂಡರು. ಜನ ಪ್ರತಿನಿಧಿಗಳು ಐದು ವರ್ಷಕ್ಕೊಮೆ ಬರುವವರು, ಅಧಿಕಾರಿಗಳು ಶಾಶ್ವತವಾಗಿ ಇರುವವರು ಎನ್ನುವ ಭಾವನೆ ಬಿಟ್ಟು ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಏಳನೇ ಸ್ಥಾನದಿಂದ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಮುಖ್ಯಮಂತ್ರಿಯವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಶೈಕ್ಷಣಿಕ ವಾತಾವರಣವನ್ನು ಸುಧಾರಣೆ ಮಾಡಿ ನಂ-1 ಸ್ಥಾನಕ್ಕೆ ತರಬೇಕು ಎಂದು ಎಚ್ಚರಿಸಿದರು.

ಹೊಸದಾಗಿ ಬಂದಿರುವ ಡಿಡಿಪಿಐ ಅವರು ಉತ್ತಮವಾಗಿ ಕೆಲಸ ಮಾಡಿ ಜಿಲ್ಲೆಯ ಫಲಿತಾಂಶವನ್ನು ಉತ್ತಮಗೊಳಿಸಬೇಕು. ಶೈಕ್ಷಣಿಕ ಪ್ರಗತಿಯ ಬಗ್ಗೆ ತಾವು ಗಮನಿಸುತ್ತಿರುವುದಾಗಿ ಹೇಳಿದ ಅವರು, ಎಸ್‌‍ಎಸ್‌‍ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೀಲ ನಕ್ಷೆ ತಯಾರಿಸಿ ನೀಡುವಂತೆ ಸೂಚಿಸಿದರು. ಮೈಸೂರು ಶಿಕ್ಷಣಕ್ಕೆ ಮೊದಲಿನಿಂದಲೂ ಅತ್ಯಂತ ಪ್ರಾಮುಖ್ಯ ನೀಡಿದ್ದ ಸಂಸ್ಥಾನ. ಇಲ್ಲೇ ಶಿಕ್ಷಣ ಸೂಚ್ಯಂಕದಲ್ಲಿ ಏಳರಿಂದ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದು ಸರಿಯಲ್ಲ. ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸಬೇಕು ಎಂದು ಸೂಚನೆ ನೀಡಿದರು.
ವರ್ಗಾವಣೆಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ನಮಗೆ ಹತ್ತಿರದ ಕಾರ್ಯಕರ್ತರನ್ನೇ ಕರೆದುಕೊಂಡು ಬರುತ್ತಿದ್ದಾರೆ. ಇದು ಕೆಟ್ಟ ನಡವಳಿಕೆ, ತಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸಭೆಯ ಆರಂಭದಲ್ಲೇ ಗೈರು ಆಗಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮುಖ್ಯಮಂತ್ರಿಯವರು, ಐತಿಹಾಸಿಕ ದಸರಾ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿಸಿದ್ದಕ್ಕೆ ಜಿಲ್ಲಾಡಳಿತದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು. ಮೈಸೂರು ಅಭಿವೃದ್ಧಿಯ ವೇಗ ಹೆಚ್ಚಾಗಬೇಕು. ನಿಗದಿತ ಅವಧಿಯ ಒಳಗೆ ಕೆಲಸಗಳು ಪೂರ್ಣಗೊಳ್ಳಬೇಕು ಎಂದು ಹಿಂದಿನ ಸಭೆಯಲ್ಲಿ ತಾವು ಸೂಚನೆ ನೀಡಿದ್ದು, ಅದು ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಅಭಿವೃದ್ಧಿ ಜೊತೆಗೆ ಮೈಸೂರು ಜನತೆಯ ಸಮಸ್ಯೆಗಳನ್ನು ಆಲಿಸುವ ಮತ್ತು ಪರಿಹಾರ ಒದಗಿಸುವ ಕೆಲಸವಾಗಬೇಕು. ಮೈಸೂರಿನ ಜನ, ನನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ತುಂಬಾ ಮಂದಿ ಬರುತ್ತಿದ್ದಾರೆ. ನಾನು ಬೆಂಗಳೂರಿನಲ್ಲಿ ಇಲ್ಲದಿದ್ದರೆ ರಾತ್ರಿವರೆಗೂ ನನಗಾಗಿ ಕಾಯುತ್ತಾ ಇರುತ್ತಾರೆ. ಇವರಲ್ಲಿ ವೈಯಕ್ತಿಕ ಸಮಸ್ಯೆಗಾಗಿ ಬರುವವರು ಕಡಿಮೆ. ಕಂದಾಯ ಇಲಾಖೆಗಳ ಸಮಸ್ಯೆಗಳಿಗಾಗಿ ಬರುವವರೇ ಹೆಚ್ಚು. ಮೈಸೂರಿನಲ್ಲೇ ಅವರ ಕೆಲಸಗಳು ಆಗಿದ್ದರೆ, ಮೈಸೂರಿನ ಕಚೇರಿಗಳಲ್ಲೇ ಕುಳಿತು ಅಧಿಕಾರಿಗಳು ಜನರ ಅಹವಾಲು ಕೇಳಿದ್ದರೆ, ಕೇಳಿ ಬಗೆಹರಿಸಿದ್ದರೆ ಅವರು ಮೈಸೂರಿನಿಂದ ಬೆಂಗಳೂರಿನವರೆಗೂ ಹುಡುಕಿಕೊಂಡು ಬರುತ್ತಿರಲಿಲ್ಲ. ಜನರನ್ನು ಅಲೆದಾಡಿಸುವುದು ಅಕ್ಷಮ್ಯ. ಇದನ್ನು ನಾನು ಸಹಿಸಲ್ಲ ಎಂದು ಎಚ್ಚರಿಸಿದರು.

ಸಿಇಒ ಮತ್ತು ಇತರ ಅಧಿಕಾರಿಗಳು ಆಸ್ಪತ್ರೆ, ಶಾಲೆ, ಹಾಸ್ಟೆಲ್‌ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ನಾನು ಕೊಟ್ಟ ಸೂಚನೆ ಪಾಲನೆ ಆಗುತ್ತಿಲ್ಲ. ಇನ್‌್ಸಪೆಕ್ಟರ್‌ಗಳು, ಪಿಡಿಒಗಳು, ವಿಎಗಳ ಮೇಲೆ ಈ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಕಚೇರಿಗಳಿಗೆ ಗೌಪ್ಯ ಭೇಟಿ ನೀಡಿದರೆ ಕೆಲಸ ಕದಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ. ಇಲ್ಲಿಯವರೆಗೂ ಅಂತಹ ಅಧಿಕಾರಿಗಳ ವಿರುದ್ಧ ವರದಿ ಬಂದಿಲ್ಲ ಏಕೆ? ಎಂದು ಪ್ರಶ್ನಿಸಿದರು. ಹಾಸ್ಟೆಲ್‌ಗಳಲ್ಲಿ ಊಟದ ವ್ಯವಸ್ಥೆಯನ್ನು ಮೇಲಿಂದ ಮೇಲೆ ಪರಿಶೀಲನೆ ನಡೆಸಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿದರು.

sambrama prabha editor suresh kt

LEAVE A REPLY

Please enter your comment!
Please enter your name here