Updated By: Priyalachhi
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಶುಕ್ರವಾರ) ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಖಾಕಿ ಸರ್ಪಗಾವಲು ಹಾಕಿದೆ. ಪ್ರಧಾನಿ ಸ್ವಾಗತಕ್ಕೆ ನಗರ ಸಿದ್ಧವಾಗಿದೆ. ಬನ್ನಂಜೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದಿಂದ ಕಲ್ಸಂಕದವರೆಗೂ ಪ್ರಧಾನಿ ರೋಡ್ ಶೋ ನಡೆಯಲಿದ್ದು, ಎರಡು ಕಡೆಗಳಲ್ಲೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಈ ರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿ ಮಾಲೀಕರಿಗೆ ಅಂದು ಅಂಗಡಿ ತೆರೆಯದಂತೆ ಸೂಚನೆಯನ್ನು ಜಿಲ್ಲಾಡಳಿತ ರವಾನಿಸಿದೆ.
ರಸ್ತೆ ಅಗೆಯುವಂತಿಲ್ಲ, ದ್ರೋಣ್ ಹಾರಿಸುವಂತಿಲ್ಲ: ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪರಿಪಾಲನೆಗೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಿದೆ. ಎಲ್ಲಿಯೂ ಯಾವುದೇ ರೀತಿಯಲ್ಲೂ ವ್ಯತ್ಯಾಸ, ಸಮಸ್ಯೆಗಳು ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನ.28ರಂದು ನಗರದಲ್ಲಿ ಯಾವುದೇ ಕಾಮಗಾರಿ, ಹೊಂಡತೋಡುವುದು ಇತ್ಯಾದಿಗಳನ್ನು ಮಾಡಬಾರದು. ಹಾಗೆಯೇ ಕಾರ್ಯಕ್ರಮ ನಡೆಯುವ ದಿನ ಸಹಿತ ಮೊದಲೆರೆಡು ದಿನ ಪರವಾನಗಿ ಇಲ್ಲದೇ ದ್ರೋಣ್ ಹಾರಿಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಲಕ್ಷಕಂಠ ಗೀತಾ ಪಾರಾಯಣದ ಬೃಹತ್ ವೇದಿಕೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮಂಗಳವಾರ ಸಂಜೆ ವೇಳೆಗೆ ಮುಖ್ಯವೇದಿಕೆಯ ನಿರ್ಮಾಣ ಕಾಮಗಾರಿ ಭಾಗಶಃ ಮುಗಿದಿತ್ತು. ಪಾರಾಯಣಕ್ಕೆ ಕುಳಿತುಕೊಳ್ಳಲು ಅಗತ್ಯ ಮ್ಯಾಟ್‌ಗಳ ಅಳವಡಿಕೆಯನ್ನು ಮಾಡಲಾಗುತ್ತಿದೆ. ವೇದಿಕೆ ಎಷ್ಟು ಎತ್ತರ ಇರಬೇಕು ಮತ್ತು ಶೂನ್ಯ ವಲಯ ನಿರ್ಮಾಣ ಇತ್ಯಾದಿಗಳು ಎಸ್‌ಪಿಜಿ ಸೂಚನೆಯಂತೆ ನಡೆಯುತ್ತಿದೆ.
ನಗರ ಸಿಂಗಾರ: ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಕೇಸರ ಬಾವುಟ ಹಾರಾಟ ಆರಂಭವಾಗಿದೆ. ಪ್ರಧಾನಿಯವರ ಭಾವಚಿತ್ರ ಇರುವ ಕಟೌಟ್‌ಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಕೆಲವು ಕಡೆಗಳಲ್ಲಿ ಕೇಸರಿ ಬಂಟಿಂಗ್ಸ್ಗಳನ್ನು ಹಾಕಲಾಗಿದೆ. ಎಲ್ಲ ಕಡೆಗಳಲ್ಲೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ.
ಶಾಲೆಗಳಿಗೆ ರಜೆ: ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲೂ ತುಸು ವ್ಯತ್ಯಾಸ ಆಗಲಿದೆ. ನ.28ಕ್ಕೆ ಸೀಮಿತವಾಗಿ ಉಡುಪಿ ನಗರ, ಮಲ್ಪೆ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಭೆ: ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆಗೆ ಹಿರಿಯ ಅಧಿಕಾರಿಗಳ ಸಭೆ ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯಿತು. ಹಿರಿಯ ಎಸ್‌ಪಿಜಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ವಿಮಾನ ನಿಲ್ದಾಣದ ಅಧಿಕಾರಿಗಳು, ಸಿ.ಐ.ಎಸ್.ಎಫ್, ಪೊಲೀಸ್ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ನವೆಂಬರ್ 28 ರಂದು ಬೆಳಗ್ಗೆ 8:15ಕ್ಕೆ ನವದೆಹಲಿಯಿಂದ ಹೊರಡುವ ಪ್ರಧಾನಿ ಮೋದಿ ಅವರು 11:05 ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ನಂತರ ವಾಯುಪಡೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ನಿರ್ಗಮಿಸಲಿದ್ದಾರೆ. ಉಡುಪಿಯಲ್ಲಿ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಧ್ಯಾಹ್ನ 2:10 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಗೋವಾಕ್ಕೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಎಲ್ಲ ರೀತಿಯ ಅತ್ಯುನ್ನತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು. ಆ್ಯಂಬುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ವಾಹನ ಸೇರಿದಂತೆ ಸೌಲಭ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಎಸ್‌ಪಿಜಿ ಅಧಿಕಾರಿಗಳು ಸೂಚಿಸಿದರು.



