Updated By: Priyalachhi
ಬೆಂಗಳೂರು: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿ ಜಾರಿ ಮಾಡಲು ರಾಜ್ಯ ಸರ್ಕಾರ ಸಿದ್ದವಿದ್ದು, ಮೀಸಲಾತಿ ಪ್ರಮಾಣವನ್ನು ಶೇ 70-75 ಕ್ಕೆ ಹೆಚ್ಚಿಸುವ ಬಗ್ಗೆ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ “ಎಲ್.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ನನಗೆ ಕೊನೆಯ ಉಸಿರು ಇರುವವರೆಗೂ, ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ ಎಂದು ಹೇಳಿದರು.
ಅಹಿಂದ ಸಮುದಾಯದವರು ತಮ್ಮ ವಿರೋಧಿಗಳಾದ ಬಿಜೆಪಿ – ಆರ್.ಎಸ್.ಎಸ್ – ಎಬಿವಿಪಿ ಸೇರುತ್ತಾರಲ್ಲಾ ಇವರಿಗೆ ಏನು ಹೇಳೋದು? ಬಿಜೆಪಿ – ಆರ್.ಎಸ್.ಎಸ್ ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಸೇರುತ್ತಾರಲ್ಲಾ ಇದಕ್ಕೇನು ಮಾಡೋದು? ದೇವರು, ಧರ್ಮದ ಹೆಸರಲ್ಲಿ ಸಾಯುತ್ತಾ ಇರೋರೆಲ್ಲಾ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ ಬಿಜೆಪಿ – ಆರ್.ಎಸ್.ಎಸ್ ಸೇರಿ ಇವರೇ ಮೂಲ ಆರ್.ಎಸ್.ಎಸ್ ನವರಿಗಿಂತ, ಹೆಡಗೆವಾರ್ ರೀತಿ ಮಾತಾಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.



