Updated By: Priyalachhi
Bigg Boss Kannada Winner: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಹಾಸ್ಯ ನಟ ಗಿಲ್ಲಿ ನಟರಾಜ ಹೊರಹೊಮ್ಮಿದ್ದಾರೆ. ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆದರು.
ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ ಅವರು ವಿಜೇತರ ಹೆಸರು ಘೋಷಿಸಿದರು. 37 ಕೋಟಿಗೂ ಅಧಿಕ ವೋಟ್ ಪಡೆದ ಗಿಲ್ಲಿ ಅವರು ಬಿಗ್ ಬಾಸ್ ಟ್ರೋಫಿ ಜತೆಗೆ 50 ಲಕ್ಷ ರೂ ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಎಸ್ ಯುವಿ ವಿಕ್ಟೋರಿಯಸ್ ಕಾರನ್ನು ತಮ್ಮದಾಗಿಸಿಕೊಂಡರು.
111 ದಿನಗಳ ಆಟದಲ್ಲಿ ಬಿಗ್ ಬಾಸ್ ಮನೆಗೆ 24 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆದರೆ ಕೊನೆಯದಾಗಿ 6 ಮಂದಿ ಫೈನಲ್‌ಗೆ ಬಂದಿದ್ದರು. ಗಿಲ್ಲಿ ನಟ, ಕಾವ್ಯ, ರಕ್ಷಿತಾ, ರಘು, ಅಶ್ವಿನಿ ಗೌಡ ಮತ್ತು ಧನುಶ್ ಅವರು ಟಾಪ್ 6 ಕಂಟೆಸ್ಟಂಟ್‌ಗಳಾಗಿದ್ದರು. ಇವರಲ್ಲಿ ಯಾರಿಗೆ ಬಿಗ್ ಬಾಸ್ ಕಿರೀಟ್ ಸಿಗಲಿಗೆ ಎಂಬ ಕುತೂಹಲ ವೀಕ್ಷಕರಲ್ಲಿತ್ತು. ಈ ಪೈಕಿ ಧನುಷ್ 5ನೇ ರನ್ನರ್ ಅಪ್ ಆದರು. ಬಳಿಕ ಕಾವ್ಯ ಮತ್ತು ರಘು ಕ್ರಮವಾಗಿ 3 ಹಾಗೂ 4ನೇ ರನ್ನರ್ ಅಪ್ ಸ್ಥಾನ ಪಡೆದರು. ಟಾಪ್ ಮೂರಲ್ಲಿ ಗಿಲ್ಲಿ, ರಕ್ಷಿತಾ ಮತ್ತು ಅಶ್ವಿನಿಗೌಡ ಇದ್ದರು.
ಈ ಪೈಕಿ ಭಾರೀ ನಿರೀಕ್ಷೆ ಮೂಡಿಸಿದ್ದ ಅಶ್ವಿನಿಗೌಡ ಅವರು 2ನೇ ರನ್ನರ್ ಅಪ್ ಆದರು. ಕೊನೆಯದಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ಮಧ್ಯೆ ಯಾರು ಅನ್ನೋ ಕುತೂಹಲ ಉಂಟಾಗಿತ್ತು. ಸುದೀಪ್ ಅವರು ಗಿಲ್ಲಿ ಅವರ ಕೈ ಮೇಲೆತ್ತುವ ಮೂಲಕ ಈ ಬಾರಿ ಬಿಗ್ ಬಾಸ್ ವಿಜೇತರನ್ನು ಘೋಷಿಸಿದರು.
ಗಿಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ: ಹಾಸ್ಯ ಮಾಡುತ್ತಲೇ ಎಲ್ಲರ ಮನಗೆದ್ದ ಗಿಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಂತೆಯೇ ಅವರಿಗೆ ದಾಖಲೆಯ ಮತಗಳೂ ಹರಿದುಬಂದಿದ್ದವು. ಫಿನಾಲೆ ಹಿನ್ನೆಲೆಯಲ್ಲಿ ಸ್ಟುಡಿಯೋ ಬಳಿ ಗಿಲ್ಲಿ ಅಭಿಮಾನಿಗಳು ಆಗಮಿಸಿ, ಗೆಲುವನ್ನು ಸಂಭ್ರಮಿಸಿದರು.
ಕಿಚ್ಚನಿಂದ ಗಿಲ್ಲಿಗೆ ಗಿಫ್ಟ್: ಗಿಲ್ಲಿ ನಟನ ಆಟ ಮೆಚ್ಚಿದ ಕಿಚ್ಚ ಸುದೀಪ ಅವರೂ ಕೂಡ ಭರ್ಜರಿ ಗಿಫ್ಟ್ ಘೋಷಣೆ ಮಾಡಿದ್ದಾರೆ. ವೈಯಕ್ತಿಕವಾಗಿ ಗಿಲ್ಲಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ವೇದಿಕೆಯಲ್ಲೇ ಅನೌನ್ಸ್ ಮಾಡಿದರು.
ರಕ್ಷಿತಾ ಶೆಟ್ಟಿಗೆ ಸಿಕ್ಕ ಬಹುಮಾನವೆಷ್ಟು?: ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿಗೆ ಒಟ್ಟು 25 ಲಕ್ಷ ರೂ ನಗದು ಬಹುಮಾನ ಸಿಕ್ಕಿದೆ.
ದಾಖಲೆಯ ವೋಟಿಂಗ್: ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಸದ್ದು ಮಾಡಿತು. ರಾಜ್ಯದಲ್ಲಿ ಅಷ್ಟೇ ಅಲ್ಲ, ಪಕ್ಕದ ರಾಜ್ಯ ಹಾಗೂ ವಿದೇಶಗಳಲ್ಲೂ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂತೆಯೇ ಈ ಬಾರಿ ದಾಖಲೆಯ ವೋಟಿಂಗ್ ಕೂಡಾ ಆಗಿದೆ. ಬಿಗ್ ಬಾಸ್ ವಿಜೇತ ಗಿಲ್ಲಿ ನಟ 37 ಕೋಟಿಗೂ ಅಧಿಕ ಮತ ಪಡೆದಿದ್ದಾರೆ. ಕಳೆದ ‘ಬಿಗ್ ಬಾಸ್ ‘ಸೀಸನ್ 11’ರ ಟ್ರೋಫಿಯನ್ನು ಗೆದ್ದಿದ್ದ ಹಳ್ಳಿ ಹೈದ ಹನುಮಂತು 5,23,89,318 ಮತಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಹೊಸ ದಾಖಲೆ ನಿರ್ಮಾಣವಾಗಿದೆ.



