Updated By: Priyalachhi
ಮೈಸೂರು: ಅರಮನೆ ಎದುರು ನಡೆದ ಸ್ಫೋಟ ಪ್ರಕರಣ ಕಾನೂನು ಸುವ್ಯವಸ್ಥೆಯ ವೈಫಲ್ಯ ಅಲ್ಲ. ಅದೊಂದು ಅಪಘಾತ. ಮೃತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಪರಿಹಾರ ನೀಡಲು ಅವಕಾಶವಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಇಂದು ಕೆ.ಆರ್.ಆಸ್ಪತ್ರೆಗೆ ಯದುವೀರ್, ಶಾಸಕ ಶ್ರೀವತ್ಸ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, “ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಲೂನ್ಗೆ ಬಳಸುವ ಹೀಲಿಯಂ ಗ್ಯಾಸ್ನ ಸಿಲಿಂಡರ್ ಸ್ಫೋಟಗೊಂಡು ಸಲೀಂ ಎಂಬಾತ ಮೃತಪಟ್ಟಿದ್ದು, ಸ್ಪೋಟದಲ್ಲಿ ಗಾಯಗೊಂಡ ಐವರಲ್ಲಿ ನಂಜನಗೂಡಿನ ಮಹಿಳೆ ಮಂಜುಳಾ ಎಂಬವರು ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ” ಎಂದು ಹೇಳಿದರು.
“ಈ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಅಸಂಘಟಿತ ವ್ಯಾಪಾರಿಗಳಿಗೆ ಒಂದು ಪ್ರತ್ಯೇಕ ಜೋನ್ ಮಾಡುವ ಕುರಿತು ಪಾಲಿಕೆಯೊಂದಿಗೆ ಮಾತನಾಡಿದ್ದೇನೆ. ಆದರೆ, ಆಯುಕ್ತರು ಏನೂ ಕ್ರಮ ತೆಗೆದುಕೊಂಡಿಲ್ಲ” ಎಂದು ತಿಳಿಸಿದರು.
“ಈ ಬಗ್ಗೆ ಮತ್ತೆ ಪ್ರಶ್ನಿಸುತ್ತೇನೆ. ಅಧಿಕಾರಿಗಳು, ಅಸಂಘಟಿತ ವ್ಯಾಪಾರಸ್ಥರನ್ನು ಗುರುತಿಸಬೇಕಾಗಿದೆ. ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರಿತವೋ ಎಂಬುದು ವರದಿಯ ನಂತರ ಗೊತ್ತಾಗಲಿದೆ. ಇಂಥ ಘಟನೆಗಳಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತದೆ. ಹಂಪಿಯಲ್ಲಿಯೂ ಒಂದು ಕೊಲೆ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಶೇ.80ರಷ್ಟು ಪ್ರವಾಸೋದ್ಯಮ ಇಳಿಕೆಯಾಗಿದೆ. ಒಂದು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಪ್ರವಾಸಿ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಭದ್ರತೆ ನೀಡಬೇಕು” ಎಂದು ಒತ್ತಾಯಿಸಿದರು.



