ಜೆಡಿಎಸ್ ಸಭೆಯಲ್ಲಿ ಹೆಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ

0
36

Updated By: Priyalachhi 

ಹಾಸನ: ಹೋರಾಟ ಮಾಡುವ ಶಕ್ತಿ ನನ್ನ ಕಾಲಲ್ಲಿ ಇಲ್ಲ, ಆದರೆ ತಲೆಯಲ್ಲಿ ಇದೆ. ನಾನು ನನ್ನ ಜೀವನದಲ್ಲಿ ಎಂದೂ ಸುಳ್ಳು ಹೇಳಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.

ಹಾಸನದಲ್ಲಿ ಸೋಮವಾರ ನಡೆದ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ದೇವೇಗೌಡರು ಭಾವನಾತ್ಮಕ ಹಾಗೂ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದರು.

“ಹಾಸನ ಜಿಲ್ಲೆ ನಮ್ಮನ್ನು ಹುಟ್ಟಿಸಿ, ಬೆಳೆಸಿದ ನೆಲ. 1962ರಿಂದ 2025ರವರೆಗೆ ಈ ಜಿಲ್ಲೆಯ ಜನರು ನಮ್ಮನ್ನು ಬೆಳೆಸಿದ್ದಾರೆ. ನಮ್ಮಪ್ಪ ಸಾಮಾನ್ಯ ರೈತ. ನಾನು ಅವರ ಎರಡನೇ ಹೆಂಡತಿಯ ಮೊದಲ ಮಗ. ಮೊದಲ ಹೆಂಡತಿಯ ಮಕ್ಕಳು ಹಾಗೂ ಅವರೆಲ್ಲರೂ ಕಾಲವಾಗಿದ್ದರು. ನನ್ನ ಬದುಕಿನ ಬಗ್ಗೆ ನಮ್ಮಪ್ಪನಿಗೆ ಭಯವಿತ್ತು. ನನ್ನ ಆರೋಗ್ಯಕ್ಕಾಗಿ ಕುಟುಂಬಸ್ಥರು ಮತ್ತು ಕಾರ್ಯಕರ್ತರು ಹಲವು ಸಲ ಪ್ರಾರ್ಥನೆ ಮಾಡಿದ್ದಾರೆ. ನನ್ನ ಅಳಿಯ ಡಾ.ಮಂಜುನಾಥ್ ನನ್ನನ್ನು ಉಳಿಸಲು ಬಹಳಷ್ಟು ಪ್ರಯತ್ನಿಸಿದ್ದಾರೆ. ರೇವಣ್ಣ ನನ್ನ ಆಯಸ್ಸಿಗಾಗಿ ಎಷ್ಟೋ ಪೂಜೆ ಮಾಡಿಸಿದ್ದಾರೆ. ನೀವು ಎಲ್ಲರೂ ನನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದೀರಿ, ಇದನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದರು.

“ಈಗ ಹೋರಾಟ ಮಾಡುವ ಶಕ್ತಿ ಕಾಲಲ್ಲಿ ಇಲ್ಲ, ಆದರೆ ತಲೆಯಲ್ಲಿ ಇದೆ. ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ರೇವಣ್ಣ ಕಾರಣ” ಎಂದ ದೇವೇಗೌಡರು, “ನಾನು ಆಕಸ್ಮಿಕವಾಗಿ ಪ್ರಧಾನಿಯಾದೆ. ಎಂದಿಗೂ ಆ ಸ್ಥಾನದ ಕನಸು ಕಾಣಲಿಲ್ಲ. ಜೆ.ಹೆಚ್.ಪಟೇಲ್ ಅವರಿಗೆ ಕುಮಾರಸ್ವಾಮಿಯನ್ನು ಮಂತ್ರಿ ಮಾಡು ಎಂದು ಹೇಳಿದ್ದೆ. ಆದರೆ ಅವರು ರೇವಣ್ಣನಿಗೆ ಕರೆ ಮಾಡಿ, ಪ್ರಮಾಣವಚನ ಸ್ವೀಕರಿಸಲು ಹೇಳಿದರು” ಎಂದು ನೆನೆದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: “ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಈಗ ಕಾಂಗ್ರೆಸ್ ಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ನಿರ್ಮಾಣಕ್ಕೆ ಹಣವಿಲ್ಲ ಎಂದು ಅವರದೇ ನಾಯಕರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ನಿರಂತರ ಟೀಕೆ ಮಾಡುತ್ತಿರುವ ಕಾಂಗ್ರೆಸ್, ಮಹಾತ್ಮ ಗಾಂಧಿ ಹೆಸರಿನ ಮನರೇಗಾ ಯೋಜನೆಗೆ ಹೆಸರು ಬದಲಾಯಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್‌ಗೆ ಮಹಾತ್ಮ ಗಾಂಧಿ ಮೇಲಿನ ಪ್ರೀತಿ ಹೊಸದೇನಲ್ಲ. ಆದರೆ ಇಂದಿರಾ ಗಾಂಧಿ ಪ್ರಧಾನಿಯಾದ ನಂತರ ಮಹಾತ್ಮ ಗಾಂಧಿಯವರನ್ನೇ ಮರೆತುಬಿಟ್ಟಿದ್ದರು” ಎಂದು ವ್ಯಂಗ್ಯವಾಡಿದರು.

sambrama prabha editor suresh kt

LEAVE A REPLY

Please enter your comment!
Please enter your name here