ಜೈಲು ಅಕ್ರಮಗಳಿಗೆ ಅಂಕುಶ: ಎನ್​​ಎಲ್​ಜಿಡಿ ಉಪಕರಣ ಬಳಸಿ ಮೊಬೈಲ್ ಪತ್ತೆ ಮಾಡುತ್ತಿರುವ ಜೈಲಾಧಿಕಾರಿಗಳು

0
62

Updated By: Priyalachhi

ಬೆಂಗಳೂರು: ರಾಜ್ಯದ ಅತಿದೊಡ್ಡ ಜೈಲಾಗಿರುವ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಅಂಕುಶ ಹಾಕಲು ಬಂಧಿಖಾನೆ ಇಲಾಖೆ ಮುಂದಾಗಿದೆ. ಮುಖ್ಯ ಅಧೀಕ್ಷಕ ಹುದ್ದೆ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಸರ್ಕಾರ ನೇಮಿಸಿದ ಐಪಿಎಸ್ ಅಧಿಕಾರಿ ಅಂಶುಕುಮಾರ್ ನೇತೃತ್ವದಲ್ಲಿ ಜೈಲು ಸಿಬ್ಬಂದಿಗಳ ವಿಶೇಷ ತಂಡ ರಚಿಸಿಕೊಂಡು, ಆಧುನಿಕ ಉಪಕರಣ ಬಳಸಿ ಕಾರಾಗೃಹದ ಒಳಗೆ ಬಳಕೆಯಾಗುತ್ತಿದ್ದ ನಿಷೇಧಿತ ವಸ್ತುಗಳನ್ನು ಪತ್ತೆ ಹಚ್ಚುತ್ತಿದೆ.

ಅಕ್ರಮದ ಕೂಪವೆಂದು ಕಳಂಕ ಹೊತ್ತಿರುವ ಸೆಂಟ್ರಲ್ ಜೈಲನ್ನು ಕಳಂಕರಹಿತ ಮಾಡಲು ಹಾಗೂ ಪಾರದರ್ಶಕತೆ ತರಲು ಯತ್ನಿಸುತ್ತಿದೆ. ಇದೇ ನಿಟ್ಟಿನಲ್ಲಿ ಕಳೆದ ಎರಡು ದಿನಗಳಲ್ಲಿ 52 ಮೊಬೈಲ್, 38 ಸಿಮ್​ ಕಾರ್ಡ್​ಗಳು, ಚಾರ್ಜರ್​​ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಪತ್ತೆ ಹಚ್ಚಿದೆ. ಅಕ್ರಮದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಪ್ರತ್ಯೇಕ 3 ಪ್ರಕರಣಗಳು ದಾಖಲಾಗಿವೆ.

ಇಷ್ಟು ದಿನಗಳ ಕಾಲ ಪೊಲೀಸರು ಬರಿಗೈಲಿ ತೆರಳಿ ದಾಳಿ ಮಾಡುತ್ತಿದ್ದರು. ಇದರ ಬಗ್ಗೆ ಸಜಾಬಂಧಿಗಳು ಮುಂಚಿತವಾಗಿಯೇ ಮಾಹಿತಿ ಅರಿತು ಮೊಬೈಲ್​ಗಳನ್ನ ಬಚ್ಚಿಟ್ಟು ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಇದನ್ನು ಮನಗಂಡ ಜೈಲಾಧಿಕಾರಿಗಳು ಆಧುನಿಕ ಉಪಕರಣ ಬಳಸಿಕೊಂಡು ಪತ್ತೆ ಕಾರ್ಯ ಮಾಡುತ್ತಿದ್ದಾರೆ. ಎಲೆಕ್ಟ್ರಿಕಲ್ ವಸ್ತುಗಳನ್ನು ಕಂಡುಹಿಡಿಯುವ ನಾನ್ ಲೀನಿಯರ್ ಜಂಕ್ಷನ್ ಡಿಟೆಕ್ಟರ್ (ಎನ್​​ಎಲ್​ಜಿಡಿ) ಉಪಕರಣ ಬಳಸಿಕೊಂಡು ಜೈಲಿನ ವಿವಿಧ ಬ್ಯಾರಕ್​ಗಳಲ್ಲಿ ಶೋಧ ನಡೆಸುತ್ತಿದ್ದಾರೆ.

ಹಾಸಿಗೆ-ದಿಂಬು, ಶೌಚಾಲಯದ ಬಿರುಕುಬಿಟ್ಟಿರುವ ಗೋಡೆಯೊಳಗೆ ಕೈದಿಗಳು ಅವಿತಿಟ್ಟಿದ್ದ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಕೈದಿಗಳ ಮೇಲೆ ನಿಗಾ ಇಡುವ ಸಲುವಾಗಿ ಜೈಲಿನಲ್ಲಿ 20 ತಂಡಗಳನ್ನ ರಚಿಸಲಾಗಿದೆ. ಹೀಗಾಗಿ ಕಳೆದ ಮೂರು ದಿನಗಳಲ್ಲಿ 52 ಮೊಬೈಲ್, 38 ಸಿಮ್ ಕಾರ್ಡ್​ಗಳು ಸೇರಿದಂತೆ ಇನ್ನಿತರ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here