ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟ ಅಸ್ತು

0
54

Updated By: Priyalachhi 

ಬೆಂಗಳೂರು: ಅರಣ್ಯ ಇಲಾಖೆ ಯಲಹಂಕ ಬಳಿಯ ಮಾದಪ್ಪನಹಳ್ಳಿ 153 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ಬೆಂಗಳೂರಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ಬಳಿಕ ಮೂರನೇ ಅತಿ ದೊಡ್ಡ ಉದ್ಯಾನ ನಿರ್ಮಾಣವಾಗಲಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ಸಚಿವ ಸಂಪುಟ ಬಳಿಕ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, 265 ವರ್ಷಗಳ ಹಿಂದೆ 1760ರಲ್ಲಿ 240 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ನಿರ್ಮಾಣವಾಗಿತ್ತು. 155 ವರ್ಷಗಳ ಹಿಂದೆ 1870ರಲ್ಲಿ 197 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಬ್ಬನ್ ಪಾರ್ಕ್ ಜನಾಕರ್ಷಣೆಯ ತಾಣವಾಗಿದೆ. ಅಂದರೆ ಕಬ್ಬನ್ ಪಾರ್ಕ್ ನಿರ್ಮಾಣವಾಗಿ 155ವರ್ಷ ಆಗಿದೆ. ಆದಾದ ಬಳಿಕ ಬೆಂಗಳೂರಿನಲ್ಲಿ ಹಲವು ಸಣ್ಣ ಉದ್ಯಾನಗಳ ನಿರ್ಮಾಣವಾಗಿದೆಯಾದರೂ ಬೃಹತ್ ಉದ್ಯಾನ ನಿರ್ಮಾಣ ಆಗಿರಲಿಲ್ಲ. ಈಗ ಅಂತಹ ಒಂದು ಬೃಹತ್ ಜೀವವೈವಿಧ್ಯ ಉದ್ಯಾನವನ್ನು ನಮ್ಮ ಸರ್ಕಾರ ಜನತೆಗೆ ಸಮರ್ಪಿಸುತ್ತಿದೆ ಎಂದರು.

ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಆಗಲಿರುವ ಈ ಉದ್ಯಾನ ರಾಜ್ಯ ರಾಜಧಾನಿಯ 3ನೇ ಅತಿದೊಡ್ಡ ಉದ್ಯಾನವನವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಈ ಹಿಂದೆ ಅರಣ್ಯ ಇಲಾಖೆ ಮಾದಪ್ಪನಹಳ್ಳಿಯಲ್ಲಿರುವ 153 ಎಕರೆ ಪ್ರದೇಶವನ್ನು ನೆಡುತೋಪು ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ಈಗ ಈ ಜಾಗವನ್ನು ಮರಳಿ ಇಲಾಖೆಗೆ ಪಡೆಯಲಾಗಿದ್ದು, ಇಲ್ಲಿರುವ ನೀಲಗಿರಿ ಮರಗಳನ್ನು ಹಂತಹಂತವಾಗಿ ತೆಗೆದು ಇಲ್ಲಿ ಸ್ಥಳೀಯ ಪ್ರಭೇದದ ಗಿಡ ಮರ ಬೆಳೆಸಿ, ಜಲ ಗುಂಡಿ ನಿರ್ಮಿಸಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ನಿರ್ಮಿಸಲಾಗುವುದು. ಮೂರು ವರ್ಷದಲ್ಲಿ ಯೋಜನೆ ಕಾರ್ಯಗತಗೊಳಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here