ಅಂದಿನ ಮತ್ತು ಇಂದಿನ ಸಿದ್ದರಾಮಯ್ಯ ಒಂದೇ. ಸಿದ್ದರಾಮಯ್ಯ ಬದಲಾಗಲು ಸಾಧ್ಯವೇ ಇಲ್ಲ: ಸಿಎಂ

0
25

Updated By: Priyalachhi

ಬೆಂಗಳೂರು: ಸರ್ಕಾರ ಹಾದಿಯೂ ತಪ್ಪಿಲ್ಲ, ನಾನೂ ಅಸಹಾಯಕ ಮುಖ್ಯಮಂತ್ರಿಯೂ ಅಲ್ಲ. ಎರಡೂವರೆ ವರ್ಷದಲ್ಲಿ ಜನರಿಗೆ ಏನು ಹೇಳಿದ್ದೇವೋ ಅದನ್ನು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ. ಮೊದಲ ಮೂರು ವಾಕ್ಯ ಹಾಗೂ ಕೊನೆಯ ವಾಕ್ಯವನ್ನು ಓದಿದರು.‌ ಭಾಷಣದಲ್ಲಿ ಕೊನೆಗೆ ಜೈ ಸಂವಿಧಾನ‌ ಅಂತನೂ ಉಲ್ಲೇಖಿಸಲಾಗಿತ್ತು. ಅದನ್ನು ಹೇಳದೆಯೇ ಆತುರ ಆತುರವಾಗಿ ಹೋದರು. ರಾಷ್ಟ್ರಗೀತೆ ಮುಗಿಯುವ ಮೊದಲೇ ಹೋದರು. ವಿಪಕ್ಷಗಳು ನನ್ನನ್ನು ಅಸಹಾಯಕ ಸಿಎಂ ಎಂದು ಟೀಕಿಸಿದ್ದಾರೆ. ಒಂದೊಂದು ಸಾರಿ ಅಸಹಾಯಕತೆಯನ್ನು ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ.‌ ಅಸತ್ಯದ ಎದುರು ಸತ್ಯ ಅಸಹಾಯಕ ಆಗುತ್ತದೆ ಎಂದರು.

ನಮ್ಮ ಐಡಿಯಾಲಜಿನೇ ಬೇರೆ, ವಿಪಕ್ಷಗಳ ಐಡಿಯಾಲಜಿನೇ ಬೇರೆ. ನಾವು ಐಡಿಯಾಲಜಿ ವಿರೋಧ ಮಾಡಬಹುದು. ಆದರೆ, ಸಂವಿಧಾನವನ್ನು ವಿರೋಧ ಮಾಡುವ ಹಾಗಿಲ್ಲ.‌ ಅದನ್ನು ಎಲ್ಲರೂ ಒಪ್ಪಬೇಕು. ಸಂವಿಧಾನದಂತೆ ಸರ್ಕಾರ ನಡೆಯಬೇಕು. ರಾಜ್ಯಪಾಲರು ಮೂಲತಃ ಒಳ್ಳೆಯವರೇ.‌ ನಾವು ರಾಜ್ಯಪಾಲರ ವಿರುದ್ಧ ಇಲ್ಲ. ಅದು ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಸ್ ಗಾರ್ ಅಜೀವಿಕ್ ಮಿಷನ್ ಗ್ರಾಮೀಣ ಅಂತ ಅದರ ಹೆಸರು. ಭಾರೀ ಕಸರತ್ತು ಮಾಡಿ ಆ ಹೆಸರಿಡಲಾಗಿದೆ. ಹೆಸರಿಟ್ಟವರಿಗೆ ಬಹುಮಾನ ಕೊಡಬೇಕು. ಬಜೆಟ್ ಭಾಷಣದಲ್ಲಿ ಮನರೇಗಾ ರದ್ದು ಮಾಡಿ ಜಿ ರಾಮ್ ಜಿ ಕಾಯ್ದೆ ತರಲಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಅದರಲ್ಲಿರುವ ರಾಮ ದಶರಥ ರಾಮನೂ ಅಲ್ಲ, ರಾಮಾಯಣದ ರಾಮನೂ ಅಲ್ಲ.‌ ಸಿದ್ದರಾಮನೂ ಅಲ್ಲ. ಆರ್ಟಿಕಲ್ 176ರ ಪ್ರಕಾರ ರಾಜ್ಯಪಾಲರು ಭಾಷಣ ಓದಬೇಕಾಗಿತ್ತು. ಓದದೇ ಇರುವುದು ಸಂವಿಧಾನ ಬಾಹಿರ. ಗ್ರಾಮೀಣಾಭಿವೃದ್ಧಿಗೆ ಮನರೇಗಾ ಸಂಜೀವಿನಿ ಅಂತ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಹೇಳಿದ್ದರು. ಈಗ ಇದ್ದಕ್ಕಿದ್ದ ಹಾಗೆ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದರ ಜತೆಗೆ, 2022ರಿಂದ ಪ್ರತಿ ವರ್ಷ ರಾಜ್ಯಕ್ಕೆ 18ರಿಂದ 20 ಸಾವಿರ ಕೋಟಿ ರೂ.ಗಳಷ್ಟು ಜಿಎಸ್​ಟಿ ಪರಿಹಾರ ನಷ್ಟವಾಗಿದೆ. 4 ವರ್ಷಗಳಲ್ಲಿ 75ರಿಂದ 80 ಸಾವಿರ ಕೋಟಿ ಇದೊಂದೇ ಬಾಬತ್ತಿನಲ್ಲಿ ನಷ್ಟವಾಗಿದೆ. 2020ರಿಂದ 2025 ರವರೆಗೆ 2,00,000 ಕೋಟಿ ರೂ.ಗಳಷ್ಟು ರಾಜ್ಯಕ್ಕೆ ನಷ್ಟವಾಗಿದೆ. ಜಿಎಸ್​ಟಿ ಪರಿಹಾರದ ಸೆಸ್ಸನ್ನು ಕೇಂದ್ರದವರು ಜನರಿಂದ ಸಂಗ್ರಹಿಸುವುದನ್ನು ನಿಲ್ಲಿಸಿದ್ದರೆ ಒಪ್ಪುತ್ತಿದ್ದೆ. 2025-26ರಲ್ಲಿ 1,67,000 ಕೋಟಿ ರೂಗಳಷ್ಟು ಸೆಸ್ಸನ್ನು ಸಂಗ್ರಹಿಸಿದ್ದಾರೆ. ಈ ವರ್ಷ ಎಲ್ಲಾ ಸೆಸ್‌, ಸರ್‌ ಚಾರ್ಜ್‌ ಮುಂತಾದವು ಸೇರಿ 6 ಲಕ್ಷ ಕೋಟಿ ರೂ ಸಂಗ್ರಹಿಸುತ್ತಿದ್ದಾರೆ ಎಂದರು.

16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ ಆಯೋಗದ ಶಿಫಾರಸುಗಳಿಂದಲೂ ನಮಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. 14ನೇ ಹಣಕಾಸು ಆಯೋಗವು ನಮಗೆ ಶೇ.4.71ರಷ್ಟು ತೆರಿಗೆ ಹಂಚಿಕೆ ಮಾಡಿತ್ತು. ಅದಕ್ಕಿಂತ ಹೆಚ್ಚಿನ ಅನುದಾನ ಸಿಕ್ಕರೆ ಮಾತ್ರ ನಮಗೆ ನ್ಯಾಯ ದೊರೆಯುತ್ತದೆಂದು ಹೇಳಿದ್ದೆವು. ಆದರೆ, 16ನೇ ಹಣಕಾಸು ಆಯೋಗ ಶೇ.4.13ರಷ್ಟನ್ನು ಮಾತ್ರ ಶಿಫಾರಸ್ಸು ಮಾಡಿದೆ. ತೆರಿಗೆ ಪಾಲನ್ನು ಶೇ.50ಕ್ಕೆ ಏರಿಸಿ ಎಂದು ಕೇಳಿದ್ದೆವು. ಆದರೆ ಶೇ.41ರಷ್ಟೇ ಕೊಟ್ಟಿದೆ. ಇದರಿಂದಲೂ ನಮಗೆ 14ನೇ ಹಣಕಾಸು ಆಯೋಗದ ಶಿಫಾರಸಿಗೆ ಹೋಲಿಸಿದರೆ ಶೇ.14.1ರಷ್ಟು ಕಡಿಮೆಯಾಗುತ್ತದೆ. ಕರ್ನಾಟಕದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 5 ವರ್ಷಗಳಲ್ಲಿ 37,372 ಕೋಟಿ ರೂ ಸಿಕ್ಕರೆ, ಉತ್ತರ ಪ್ರದೇಶಕ್ಕೆ 1.17 ಲಕ್ಷ ಕೋಟಿ, ಮಹಾರಾಷ್ಟ್ರಕ್ಕೆ 79.6 ಸಾವಿರ ಕೋಟಿ, ಮಧ್ಯಪ್ರದೇಶಕ್ಕೆ 48 ಸಾವಿರ ಕೋಟಿ ದೊರೆಯಲಿದೆ. ಹಾಗೆಯೇ ಪ್ರಕೃತಿ ವಿಕೋಪ ನಿಧಿಯಲ್ಲೂ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡಲಾಗಿದೆ. ನಮಗೆ 5,135 ಕೋಟಿ ರೂ, ಮಹಾರಾಷ್ಟ್ರಕ್ಕೆ 31,597 ಕೋಟಿ, ಗುಜರಾತಿಗೆ 6,766 ಕೋಟಿ ಸಿಗಲಿದೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಬದಲಾಗಲು ಸಾಧ್ಯವೇ ಇಲ್ಲ: 2013-2018ರ ವರೆಗಿನ ಸಿದ್ದರಾಮಯ್ಯ ಅಲ್ಲ ಅಂದಿದ್ದಾರೆ. ಆಗ ನೀವು ನಮ್ಮನ್ನು ಹೊಗಳಿದ್ದೀರಾ?. ಆವತ್ತು ಇದ್ದ ಸಿದ್ದರಾಮಯ್ಯ, ಇಂದು ಇರುವ ಸಿದ್ದರಾಮಯ್ಯ ಒಂದೆನೇ. ಸಿದ್ದರಾಮಯ್ಯ ಬದಲಾವಣೆ ಆಗಲು ಸಾಧ್ಯನೇ ಇಲ್ಲ. ಸಿದ್ದರಾಮಯ್ಯ ಅವರು ಈಗ ಮೃದುವಾಗಿದ್ದಾರೆ ಅಂತಾರೆ. ಸಂವೇದನೆ ಇಲ್ಲ ಅಂದಿದ್ದಾರೆ. ನಿಮ್ಮ ಸರ್ಕಾರದ ವೇಳೆ ಆಕ್ಸಿಜನ್ ಇಲ್ಲದೇ ನೂರಾರು ಜನ‌ ಮೃತರಾದರು ಆಗ ಸಂವೇದನೆ ಇತ್ತಾ?, ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 36 ಜನ ಮೃತಪಟ್ಟರು. ನೀವು ಮೂರು ಜನ‌ ಸಾವನ್ನಪ್ಪಿದ್ದಾರೆ ಅಂದ್ರಿ. ಆಗ ಸಂವೇದನೆ ಇತ್ತಾ?. ಸಂವೇದನೆ ರಹಿತವಾದ ಸರ್ಕಾರ ಅದಾಗಿತ್ತು. ಮೈಸೂರು ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್​​ನಲ್ಲಿ ಕನ್ನಡಿಗರು ಇದ್ದರಾ?. ಆಗ ಸಂವೇದನೆ ಇರಲಿಲ್ವಾ?. ಸಂವೇದನೆ ಬಗ್ಗೆ ಮಾತನಾಡುವವರಿಗೆ ಸಂವೇದನೆ ಬಗ್ಗೆ ಗೊತ್ತಿರಬೇಕಲ್ಲಾ?. ನಿಮಗೆ ಸಂವೇದನೆ ಇಲ್ಲ. ನಮ್ಮದು ಸಂವೇದನಾಶೀಲ ಸರ್ಕಾರ ಅನ್ನೋದಕ್ಕೆ ದೇವನಹಳ್ಳಿಯ ರೈತರ ಮನವಿಗೆ ಮಣಿದು 1,770 ಎಕರೆ ಭೂಮಿಯನ್ನು ಭೂ ಸ್ವಾಧೀನ ಮಾಡುವುದನ್ನು ಕೈಬಿಟ್ಟಿದೆ. ಹಾವೇರಿಯಲ್ಲಿ ನೀವು ರೈತರ ಮೇಲೆ ಗೋಲಿಬಾರ್ ಮಾಡಿದ್ದೀರಿ.‌ ಸಂವೇದನೆ ಇತ್ತಾ ಎಂದು ಪ್ರಶ್ನಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here